ADVERTISEMENT

‘ಕೆಎಸ್‌ಪಿಸಿಬಿ’ ಮೊಬೈಲ್ ಆ್ಯಪ್‌ಗೆ ಸಿ.ಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 19:43 IST
Last Updated 19 ಜನವರಿ 2021, 19:43 IST

ಬೆಂಗಳೂರು: ‘ಆರ್ಥಿಕ ಅಭಿವೃದ್ಧಿ ಮತ್ತು ಕೈಗಾರಿಕೀಕರಣವನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳದೇ ಇದ್ದರೆ, ನಾವು ಸೇವಿಸುವ ಗಾಳಿ, ನೀರು ಮಲಿನಗೊಂಡು ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿವೃದ್ಧಿಪಡಿಸಿದ ‘ಕೆಎಸ್‌ಪಿಸಿಬಿ’ ಮೊಬೈಲ್ ಆ್ಯಪ್ ಹಾಗೂ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅರ್ಕಾವತಿ ಮತ್ತು ವೃಷಭಾವತಿ ನದಿ ಮೂಲಗಳಿಗೆ ಚರಂಡಿ ನೀರು ವಿಸರ್ಜಿಸಿ ಮಲಿನಗೊಳಿಸುತ್ತಿರುವ ವಿಷಯವನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಕೈಗಾರಿಕಾ ತ್ಯಾಜ್ಯ ಸಾಗಣೆ, ವೈಜ್ಞಾನಿಕ ವಿಲೇವಾರಿ ಮೇಲೆ ನಿಗಾ ಹಾಗೂ ನಿಯಂತ್ರಣಕ್ಕಾಗಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿದೆ. ಇದರಿಂದಾಗಿ ಮಾಲಿನ್ಯ ತಡೆಯಲು ಸಾಧ್ಯವಾಗಲಿದೆ’ ಎಂದೂ ಮುಖ್ಯಮಂತ್ರಿ ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ, ಜ್ಞಾಪನಾ ಪತ್ರ ಹಾಗೂ ಸುತ್ತೋಲೆಗಳ ಸಂಗ್ರಹದ ಪುಸ್ತಕ ಮತ್ತು ಪರಿಸರ ವಾಹಿನಿ ಪತ್ರಿಕೆಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಅರಣ್ಯ ಸಚಿವ ಆನಂದ್ ಸಿಂಗ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.