ADVERTISEMENT

ಪೊಲೀಸ್ ನೇಮಕದಲ್ಲಿ ಅಕ್ರಮ; ಜೈಲು ಪಾಲಾದ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 20:51 IST
Last Updated 22 ಮಾರ್ಚ್ 2021, 20:51 IST

ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಆರೋಪದಡಿ ಮೂವರು ಅಸಲಿ ಹಾಗೂ ಮೂವರು ನಕಲಿ ಅಭ್ಯರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

‘ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಕಳೆದ ವರ್ಷ ಪ್ರಕ್ರಿಯೆ ಆರಂಭವಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮೂವರು ಅಭ್ಯರ್ಥಿಗಳು, ತಮ್ಮ ಪರವಾಗಿ ನಕಲಿ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕಳುಹಿಸಿ ಹುದ್ದೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೇ ತಿಂಗಳು ನಡೆದ ಅಂತಿಮ ದಾಖಲಾತಿ ಪರಿಶೀಲನೆ ವೇಳೆ ಅಭ್ಯರ್ಥಿಗಳ ಅಕ್ರಮ ಬಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಭ್ಯರ್ಥಿ ಮಲ್ಲಯ್ಯ ಪೂಜಾರಿ ಎಂಬುವರ ಪರವಾಗಿ ಸೈಯದ್ ಚಿಮ್ಮಡ್, ಜಗದೀಶ್ ದೊಡ್ಡಗೌಡರ ಪರವಾಗಿ ಪ್ರಕಾಶ್ ಆಡಿನ್ ಹಾಗೂ ನಾಗಪ್ಪ ಪರವಾಗಿ ಮಲ್ಲಿಕಾರ್ಜುನ್ ಎಂಬುವರು ಪರೀಕ್ಷೆಗೆ ಹಾಜರಾಗಿದ್ದರು. ಇವರೆಲ್ಲರ ವಿರುದ್ಧ ಮಡಿವಾಳ ಹಾಗೂ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸಂಬಂಧಿಗೆ ನೆರವು ನೀಡಿದ ಮಾಜಿ ಸೈನಿಕ: ‘‘ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಎಂಬ ಮೂರು ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆರೋಪಿ ನಾಗಪ್ಪ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರು. ಆದರೆ, ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಭಯ ಅವರಲ್ಲಿತ್ತು. ಹೀಗಾಗಿ, ಸಂಬಂಧಿಯೂ ಆದ ಮಲ್ಲಿಕಾರ್ಜುನ ನೆರವು ಪಡೆದಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಮಾಜಿ ಸೈನಿಕರಾಗಿದ್ದ ಮಲ್ಲಿಕಾರ್ಜುನ್, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ, ತಮ್ಮ ಹೆಸರು ನಾಗಪ್ಪ ಎಂದು ಹೇಳಿಕೊಂಡಿದ್ದರು. ದಾಖಲೆ ಪರಿಶೀಲನೆ ವೇಳೆ ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

‘ಉಳಿದ ನಾಲ್ವರು ಆರೋಪಿಗಳು ಸಹ ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಿದ್ದರು. ಕೃತ್ಯಕ್ಕಾಗಿ ನಕಲಿ ಅಭ್ಯರ್ಥಿಗಳು ಅಸಲಿ ಅಭ್ಯರ್ಥಿಗಳಿಂದ ಹಣ ಪಡೆದಿರುವ ಮಾಹಿತಿಯೂ ಇದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.