ADVERTISEMENT

ಕೆಎಸ್‌ಆರ್‌ಟಿಸಿ ಬಳಕೆಗೆ ನಿಷೇಧ ಇಲ್ಲ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 23:44 IST
Last Updated 4 ಜೂನ್ 2021, 23:44 IST
ಕೆಎಸ್‌ಆರ್‌ಟಿಸಿ ಬಸ್
ಕೆಎಸ್‌ಆರ್‌ಟಿಸಿ ಬಸ್   

ಬೆಂಗಳೂರು: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ಮಾರ್ಕ್ ಬಳಕೆಗೆ ನಿಷೇಧಿಸುವ ಯಾವುದೇ ಆದೇಶ ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್‌ನಿಂದ ಬಂದಿಲ್ಲ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸ್ಪಷ್ಟಪಡಿಸಿದ್ದಾರೆ.

‘ಎರಡು ರಾಜ್ಯಗಳ ನಡುವಿನ ಕಾನೂನಾತ್ಮಕ ಹೋರಾಟ ಅಂತ್ಯಗೊಂಡಿದೆ ಎಂಬ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿವೆ. ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್‌ನಿಂದ ಈವರೆಗೆ ಯಾವುದೇ ಆದೇಶವೂ ನಮಗೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.

ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲೇಟ್‌ ಬೋರ್ಡ್‌ (ಐಪಿಎಬಿ) ಮುಂದೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿ ಸಂಬಂಧವೂ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ. ಏತನ್ಮಧ್ಯೆ, ಈ ಮಂಡಳಿಯನ್ನೇ ರದ್ದುಪಡಿಸಿ ಕೇಂದ್ರ ಸರ್ಕಾರ ಏಪ್ರಿಲ್ 4ರಂದು ಸುಗ್ರೀವಾಜ್ಞೆ ಹೊರಡಿಸಿದೆ. ಅಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ನೋಂದಣಿ ಪ್ರಸ್ತುತ ಜಾರಿಯಲ್ಲಿದೆ’ ಎಂದು ಸ್ಪಷ್ಟ‍ಪಡಿಸಿದ್ದಾರೆ.

ADVERTISEMENT

‘ಕೇರಳ ಸಾರಿಗೆ ಸಂಸ್ಥೆಯು ರಾಜ್ಯ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿಗೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂಬ ಸುದ್ದಿಗಳು ಪ್ರಕಟವಾಗಿದೆ. ಅದು ಕೂಡ ಸುಳ್ಳು ವರದಿ. ಒಂದು ವೇಳೆ ಕೇರಳ ಸಾರಿಗೆ ಸಂಸ್ಥೆ ಆ ರೀತಿಯ ನೋಟಿಸ್ ನೀಡಿದರೆ ಸೂಕ್ತ ಉತ್ತರ ನೀಡಲಾಗುವುದು. ಈ ಹೆಸರು ಉಳಿಸಿಕೊಳ್ಳಲು ಕಾನೂನು ಹೋರಾಟ ಮುಂದುವರಿಸಿದ್ದೇವೆ. ವಕೀಲರ ಜತೆ ಚರ್ಚೆ ನಡೆಸಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.