ADVERTISEMENT

ಚಾಲಕರ ನಿದ್ದೆ ತಡೆಯಲು ಕೃತಕ ಬುದ್ಧಿಮತ್ತೆ ಸಾಧನ

ಮೊದಲ ಹಂತದಲ್ಲಿ 500 ಬಸ್‌ಗಳಿಗೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:27 IST
Last Updated 3 ಆಗಸ್ಟ್ 2019, 19:27 IST
ಕೆಎಸ್‌ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)
ಕೆಎಸ್‌ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಚಾಲನೆ ವೇಳೆ ಚಾಲಕರು ನಿದ್ರೆಗೆ ಜಾರುವುದನ್ನು ತಡೆಯಲು 500 ಬಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಲುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ.

ಈಕೃತಕ ಬುದ್ಧಿಮತ್ತೆಯ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌) ಚಿಕ್ಕ ಉಪಕರಣವನ್ನು ಚಾಲಕನ ಮುಂಭಾಗದ ಗಾಜಿನ ಮೇಲೆಯೇ ಅಳವಡಿಸಲಾಗುತ್ತದೆ. ಸೆನ್ಸರ್ ಮೂಲಕ ಅದು ಆತನ ಕಣ್ಣಿನ ಮೇಲೆ ಸದಾ ನಿಗಾ ಇಡುತ್ತದೆ. ನಿದ್ರೆಗೆ ಜಾರುವ ಸಂದರ್ಭ ಕಂಡು ಬಂದರೆ ಕೂಡಲೇ ಎಚ್ಚರಿಕೆ ನೀಡುತ್ತದೆ.

‘ಚಾಲಕನನ್ನು ಜಾಗೃತಗೊಳಿಸುವುದಲ್ಲದೇ ಅದರ ಮಾಹಿತಿಯನ್ನು ಕಂಟ್ರೋಲ್‌ ರೂಂಗೆ ರವಾನೆ ಮಾಡುತ್ತದೆ. ಅದನ್ನು ಆಧರಿಸಿ ಬಸ್ ಚಾಲಕನಿಗೆ ಎಚ್ಚರಿಕೆ ನೀಡಬಹುದು, ಅಗತ್ಯ ಎನಿಸಿದರೆ ಆ ಬಸ್‌ಗೆ ಬೇರೆ ಚಾಲಕನನ್ನು ನಿಯೋಜಿಸಲು ಅನುಕೂಲವಾಗುತ್ತದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾತ್ರಿ ದೂರದ ಊರುಗಳಿಗೆ ಬಸ್‌ಗಳನ್ನು ಚಾಲನೆ ಮಾಡುವವರ ಮೇಲೆ ನಿಗಾ ಇಡಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುವುದು. ‘500 ಮೀಟರ್ ದೂರದಲ್ಲಿ ಅಪಘಾತ ವಲಯ ಇದ್ದರೆ, ಎದುರಿನಿಂದ ವಾಹನ ಅಡ್ಡಾದಿಡ್ಡಿಯಾಗಿ ಬರುತ್ತಿದ್ದರೆ ಅದನ್ನು ರೇಡಿಯೊ ಫ್ರೀಕ್ವೆನ್ಸಿ ಮೂಲಕ ಗಮನಿಸಿ ಚಾಲಕನಿಗೆ ಮಾಹಿತಿ ನೀಡುತ್ತದೆ. ಆಗ ಚಾಲಕ ಜಾಗೃತಿ ವಹಿಸಬಹುದು’ ಎಂದರು.

‘ಕಳೆದ ಒಂದು ವರ್ಷದಿಂದ ಒಟ್ಟು 11 ಬಸ್‌ಗಳಲ್ಲಿ ಈ ಉಪಕರಣಗಳನ್ನು ಅಳವಡಿಸಿ ಪ್ರಯೋಗ ಮಾಡಲಾಗಿದೆ. ಉತ್ತಮವಾದ ಫಲಿತಾಂಶ ಸಿಕ್ಕಿದೆ. ಹೀಗಾಗಿ ಒಂದೆರಡು ತಿಂಗಳಲ್ಲೇ ರಾತ್ರಿ ವೇಳೆ ದೂರದ ಊರುಗಳಿಗೆ ಸಂಚರಿಸುವ 500 ಬಸ್‌ಗಳಿಗೆ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.