ADVERTISEMENT

ಹಲವು ಬೇಡಿಕೆಗಳ ಈಡೇರಿಕೆಗೆ ಆ.5ರಿಂದ ಸಾರಿಗೆ ಬಸ್‌ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:23 IST
Last Updated 16 ಜುಲೈ 2025, 15:23 IST
<div class="paragraphs"><p>ಸಾರಿಗೆ ನೌಕರರ ಮುಷ್ಕರ</p></div>

ಸಾರಿಗೆ ನೌಕರರ ಮುಷ್ಕರ

   

ಬೆಂಗಳೂರು: ವೇತನ ಪರಿಷ್ಕರಣೆ, ಹಿಂಬಾಕಿ ನೀಡುವುದು ಸೇರಿದಂತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್‌ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಸಮಿತಿಯ ಪರವಾಗಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾರ್ಮಿಕ ಸಂಘಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆಗಳು ನಿಗಮಕ್ಕೆ ಅನ್ವಯವಾಗುತ್ತಿದ್ದು, 1996ರಲ್ಲಿ ನಡೆದ ಒಪ್ಪಂದದಂತೆ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಯಬೇಕು. 2020ರಿಂದ ಅನ್ವಯವಾಗುವಂತೆ 2023ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಿರಲಿಲ್ಲ. 2024ಕ್ಕೆ ಮತ್ತೆ ವೇತನ ಪರಿಷ್ಕರಣೆಯಾಗಬೇಕಿತ್ತು. ಅದನ್ನೂ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ’ ಎಂದು ತಿಳಿಸಿದರು.

ADVERTISEMENT

‘ಕಳೆದ ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಲು ನಿರ್ಧರಿಸಲಾಗಿತ್ತು. ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರಿಂದ ಮುಷ್ಕರ ಕೈಬಿಡಲಾಗಿತ್ತು. ಆದರೆ, 2023ರಲ್ಲಿ ವೇತನ ಪರಿಷ್ಕರಣೆಯಾಗಿದ್ದು, 2027ಕ್ಕೆ ಮುಂದಿನ ಒಪ್ಪಂದ. ಸರ್ಕಾರದಿಂದ ಯಾವುದೇ ಬಾಕಿ ಹಣ ಕೊಡಬೇಕಿಲ್ಲ ಎಂದು ಹೇಳಿ ನಿಗಮದ ನೌಕರರಿಗೆ ಆಘಾತ ನೀಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ಪರಿಷ್ಕರಣೆಯ ಹಿಂಬಾಕಿ ನೀಡಬೇಕು. 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಮೂಲವೇತನದ ಶೇ 25ರಷ್ಟು ಹೆಚ್ಚಳ ಮಾಡಬೇಕು. ಅಲ್ಲಿಂದ ಇಲ್ಲಿಯರೆಗಿನ 18 ತಿಂಗಳ ಹಿಂಬಾಕಿಯನ್ನೂ ಪಾವತಿಸಬೇಕು. ಮುಷ್ಕರಕ್ಕೆ ಸಂಬಂಧಪಟ್ಟ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಅಧ್ಯಕ್ಷ ಬಿ. ಜಯದೇವರಾಜೇ ಅರಸು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ (ಸಿಐಟಿಯು) ಅಧ್ಯಕ್ಷ ಎಚ್‌.ಡಿ. ರೇವಪ್ಪ, ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯೀಸ್ ಯೂನಿಯನ್‌ ಅಧ್ಯಕ್ಷ ವೆಂಕರಮಣಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್‌ ಕೆ.ಆರ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.