ADVERTISEMENT

ಸಾರಿಗೆ ನೌಕರರಿಗೆ ಶೀಘ್ರ 6ನೇ ವೇತನ ಆಯೋಗದ ಸೌಲಭ್ಯ: ಲಕ್ಷ್ಮಣ ಸವದಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 18:36 IST
Last Updated 21 ಮಾರ್ಚ್ 2021, 18:36 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಹೊಳಲ್ಕೆರೆ: ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಸೌಲಭ್ಯಗಳನ್ನು ಶೀಘ್ರವೇ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.

ತಾಲ್ಲೂಕಿನ ಬಸಾಪುರ ಗೇಟ್‌ನಲ್ಲಿ ಭಾನುವಾರ ₹ 16 ಕೋಟಿ ವೆಚ್ಚದ ಕೆಎಸ್‌ಆರ್‌ಟಿಸಿ ಚಾಲಕರ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ₹ 9 ಕೋಟಿ ವೆಚ್ಚದ ಬಸ್ ಡಿಪೊ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊರೊನಾ ಸಂಕಷ್ಟ ಕಾಲದಲ್ಲೂ ಸರ್ಕಾರದಿಂದ ₹ 1,900 ಕೋಟಿ ಹಣ ಪಡೆದು ಎಲ್ಲಾ ನೌಕರರಿಗೆ ವೇತನ ನೀಡಿದ್ದೇವೆ. ಆದರೂ ಕೆಲವರ ಮಾತು ಕಟ್ಟಿಕೊಂಡು ಮುಷ್ಕರ ನಡೆಸಿದರು. ಮುಷ್ಕರದ ವೇಳೆ ನಮ್ಮ ನೌಕರರೇ ಬಸ್‌ಗಳಿಗೆ ಕಲ್ಲು ಹೊಡೆದದ್ದು ನೋವು ತಂದಿತ್ತು. ಸರ್ಕಾರ ಮತ್ತು ನೌಕರರು ಒಂದು ಕುಟುಂಬದ ಸದಸ್ಯರಿದ್ದಂತೆ. ನಮ್ಮವರೇ ನಮ್ಮ ಮನೆಗೆ ಬೆಂಕಿ ಇಡಲು ಮುಂದಾದರೆ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮತ್ತೆ ಏಪ್ರಿಲ್‌ 7ರಿಂದ ಮುಷ್ಕರ ನಡೆಸುವುದಾಗಿ ನೋಟಿಸ್ ನೀಡಿದ್ದಾರೆ. ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9ನ್ನು ಈಡೇರಿಸಿ ಆದೇಶ ಹೊರಡಿಸಲಾಗಿದೆ. ಯಾರದೋ ಕುಮ್ಮಕ್ಕಿನಿಂದ ಮುಷ್ಕರಕ್ಕೆ ಮುಂದಾದರೆ ತೊಂದರೆಗೆ ಸಿಲುಕುತ್ತೀರಿ. ಸರ್ಕಾರ ನಾಲ್ಕೂ ನಿಗಮಗಳ ನೌಕರರ ಹಿತ ಕಾಯಲು ಬದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.