ADVERTISEMENT

21ರಿಂದಲೇ ಸಾರಿಗೆ ಮುಷ್ಕರ: ಗೊಂದಲದಲ್ಲಿ ನೌಕರರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:43 IST
Last Updated 14 ಮಾರ್ಚ್ 2023, 22:43 IST
ಎಚ್‌.ವಿ. ಅನಂತಸುಬ್ಬರಾವ್‌
ಎಚ್‌.ವಿ. ಅನಂತಸುಬ್ಬರಾವ್‌   

ಬೆಂಗಳೂರು: ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನಮನಸ್ಕರ ವೇದಿಕೆ ಮಾರ್ಚ್ 24ರಿಂದ ಮುಷ್ಕರಕ್ಕೆ ನಿರ್ಧರಿಸಿದ್ದರೆ, ನೌಕರರ ಜಂಟಿ ಕ್ರಿಯಾ ಸಮಿತಿ ಮಾ.21ರಿಂದಲೇ ಮುಷ್ಕರಕ್ಕೆ ಮುಂದಾಗಿದೆ. ಎರಡೂ ಬಣಗಳು ಪ್ರತ್ಯೇಕವಾಗಿ ಕರೆ ನೀಡಿರುವುದು ನೌಕರರನ್ನು ಗೊಂದಲಕ್ಕೆ ದೂಡಿದೆ.

ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ನೇತೃತ್ವದ ಸಾರಿಗೆ ನಿಗಮಗಳ ನೌಕರರ ಸಮಾನಮನಸ್ಕರ ವೇದಿಕೆಯು ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದೆ. ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು ಎಂಬುದು ಈ ವೇದಿಕೆಯ ಪ್ರಮುಖ ಬೇಡಿಕೆ.

ಇನ್ನೊಂದೆಡೆ ಎಚ್‌.ವಿ.ಅನಂತಸುಬ್ಬರಾವ್ ನೇತೃತ್ವದಲ್ಲಿ ‘ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ’ ಸೋಮವಾರ ಸಭೆ ನಡೆಸಿ ಮಾ.21ರಿಂದಲೇ ಮುಷ್ಕರ ಆರಂಭಿಸಲು ಕರೆ ನೀಡಿದೆ. ’ಮೂಲ ವೇತನಕ್ಕೆ ಡಿ.ಎ ವಿಲೀನಗೊಳಿಸಿ ಪರಿಷ್ಕೃತ ವೇತನ ನೀಡಬೇಕು. ಬಳಿಕ ಆ ಮೂಲ ವೇತನದಲ್ಲಿ ಶೇ 25ರಷ್ಟನ್ನು ಹೆಚ್ಚಳ ಮಾಡುವ ಒಪ್ಪಂದ ಏರ್ಪಡಬೇಕು’ ಎಂಬುದು ಜಂಟಿ ಸಮಿತಿಯ ಪ್ರಮುಖ ಬೇಡಿಕೆ. ಎರಡೂ ಬಣದ ಬೇಡಿಕೆಗಳು ಭಿನ್ನವಾಗಿರುವುದು ಒಗ್ಗಟ್ಟಿನ ಹೋರಾಟಕ್ಕೆ ತೊಡಕಾಗಿದೆ.

ADVERTISEMENT

ಇನ್ನೊಂದೆಡೆ 2020ರಲ್ಲಿ ಮುಷ್ಕರ ನಡೆಸಿದ್ದ ನೌಕರರಲ್ಲಿ ಸಾವಿರಾರು ಮಂದಿ ವಜಾಗೊಂಡು ತೊಂದರೆ ಅನುಭವಿಸಿದರು. ನೂರಕ್ಕೂ ಹೆಚ್ಚು ಮಂದಿ ಇನ್ನೂ ಕೆಲಸಕ್ಕೆ ಮರಳಲು ಸಾಧ್ಯವಾಗಿಲ್ಲ. ಮತ್ತೆ ಮುಷ್ಕರಕ್ಕೆ ಇಳಿದು ವಜಾಗೊಳ್ಳುವ ಆತಂಕ ನೌಕರರನ್ನು ಕಾಡುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಚ್.ವಿ.ಅನಂತಸುಬ್ಬರಾವ್, ‘2020ರಲ್ಲಿ ಮುಷ್ಕರ ನಡೆಸಿದಾಗ ಮುಂದಿಟ್ಟಿದ್ದ ಬೇಡಿಕೆಗಳ ಈಡೇರಿಕೆಗೆ ಅಸಾಧ್ಯವಾಗಿದ್ದವು. ಆದ್ದರಿಂದ ವಜಾಗೊಳಿಸಲು ಸರ್ಕಾರ ಮುಂದಾಯಿತು. ಆದರೆ, ನಾಲ್ಕು ವರ್ಷಗಳಿಂದ ವೇತನ ಹೆಚ್ಚಳ ಒಪ್ಪಂದ ಏರ್ಪಟ್ಟಿಲ್ಲ. ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಕಷ್ಟವಲ್ಲ. ಆದ್ದರಿಂದ ವಜಾಗೊಳ್ಳುವ ಆತಂಕ ನೌಕರರಿಗೆ ಬೇಡ’ ಎಂದು ಹೇಳಿದರು.

‘ಮಾರ್ಚ್ ಕೊನೆಯ ವಾರದಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇರುವುದರಿಂದ 24ರಿಂದ ಮುಷ್ಕರ ನಡೆಸಿದರೆ ಫಲಪ್ರದ ಆಗುವುದಿಲ್ಲ. ಹಾಗಾಗಿ ಮೂರು ದಿನ ಮುಂಚಿತವಾಗಿ ಮುಷ್ಕರ ಆರಂಭಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. 21ರಿಂದಲೇ ಮುಷ್ಕರ ನಡೆಸಲು ಸಹಕಾರ ನೀಡುವಂತೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರಿಗೂ ಮನವಿ ಮಾಡಿದ್ದೇವೆ. ಅಂದು ನಾಲ್ಕೂ ನಿಗಮಗಳ ಬಸ್‌ಗಳ ಸಂಚಾರ ಇರುವುದಿಲ್ಲ’ ಎಂದು ತಿಳಿಸಿದರು.

‘ಸಮಾಲೋಚನೆ ಬಳಿಕ ನಿರ್ಧಾರ’

‘21ರಿಂದಲೇ ಮುಷ್ಕರ ಆರಂಭಿಸಲು ಅನಂತಸುಬ್ಬರಾವ್ ಅವರ ಸಂಘಟನೆಯಿಂದ ಮನವಿ ಬಂದಿದೆ. ಆದರೆ, ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

‘ಒಟ್ಟಾಗಿ ಹೋರಾಟ ನಡೆಸಬಹುದಿತ್ತು. ಆದರೆ, ಬೇಡಿಕೆಗಳು ವಿಭಿನ್ನ ಆಗಿವೆ. ಸರ್ಕಾರಿ ನೌಕರರಿಗೆ ಸಮಾನ ವೇತನ ಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಅಲ್ಲದೇ, ದಿಢೀರ್ ಮುಷ್ಕರ ನಡೆಸಿದರೆ ಕಾನೂನಿನ ಬಲ ದೊರಕುವುದಿಲ್ಲ. 14 ದಿನ ಮುಂಚಿತವಾಗಿಯೇ ನೋಟಿಸ್ ನೀಡಬೇಕಾಗುತ್ತದೆ’ ಎಂದರು.

‘ಕಾನೂನು ಪಾಲನೆ ಮಾಡದಿದ್ದರೆ ನೌಕರರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದಂತೆ ಆಗಲಿದೆ. 14 ದಿನ ಮುಂಚಿತವಾಗಿ ನೋಟಿಸ್ ನೀಡಿ 24ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ. ಈ ಎಲ್ಲಾ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸ್ಪಷ್ಪಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.