ADVERTISEMENT

ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ ನೋಟಿಸ್‌

ಮುಷ್ಕರಕ್ಕೆ ಕರೆ ನೀಡಿದ್ದ ಕೆಎಸ್‌ಆರ್‌ಟಿಸಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 15:42 IST
Last Updated 6 ಆಗಸ್ಟ್ 2025, 15:42 IST
<div class="paragraphs"><p>ಸಾರಿಗೆ ಮುಷ್ಕರ </p></div>

ಸಾರಿಗೆ ಮುಷ್ಕರ

   

ಬೆಂಗಳೂರು: ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರದಲ್ಲಿ ಪಾಲ್ಗೊಂಡ ವಿವಿಧ ನಿಗಮಗಳ ನೌಕರರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.

ಮಂಗಳವಾರ ಮುಷ್ಕರ ನಡೆಸಲು ಕರೆ ನೀಡಲಾಗಿತ್ತು. ಮುಷ್ಕರ ನಡೆಸದಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಈ ನಡುವೆ ಚಾಲಕರು, ನಿರ್ವಾಹಕರು, ಡಿಪೊ ಸಿಬ್ಬಂದಿ ಸೇರಿ ಹಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗದೇ ಮಧ್ಯಾಹ್ನದ ಬಳಿಕ ಹಾಜರಾದವರಿಗೆ ತಡವಾಗಲು ಕಾರಣವೇನು ಎಂದು ವಿವರಣೆ ನೀಡುವಂತೆ ನೋಟಿಸ್‌ ಕಳುಹಿಸಲಾಗಿದೆ. ಮಧ್ಯಾಹ್ನದ ಬಳಿಕವೂ ಬಾರದವರಿಗೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

ADVERTISEMENT

ಸಾರಿಗೆಯು ‘ಕರ್ನಾಟಕ ಅಗತ್ಯ ಸೇವಾ ನಿರ್ವಹಣೆ’ ಆಗಿರುವುದರಿಂದ ಮುಷ್ಕರದಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೂ, ಅಧಿಕೃತವಾಗಿ ರಜೆ ಹಾಕದೇ ಅನಧಿಕೃತವಾಗಿ ಗೈರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದೀರಿ. ಇದರಿಂದಾಗಿ ದೈನಂದಿನ ಕಾರ್ಯನಿರ್ವಹಣೆಗೆ ಅಡಚಣೆಯಾಗಿದೆ. ಕಾನೂನು ಬಾಹಿರವಾಗಿ ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಸಂಸ್ಥೆಯ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿದ್ದೀರಿ. ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದೀರಿ. ನಿಗಮದ ನೌಕರರ ನಡತೆ ಮತ್ತು ಶಿಸ್ತು ನಿಯಮಾವಳಿಯನ್ನು ಉಲ್ಲಂಘಿಸಿದ್ದೀರಿ’ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

‘ಮುಷ್ಕರ ನಡೆಸದಂತೆ ಹೈಕೋರ್ಟ್‌ ನಿರ್ದೇಶನ ನೀಡಿರುವುದನ್ನು ಎಲ್ಲರಿಗೂ ತಿಳಿಸಲಾಗಿತ್ತು. ಆದರೂ ಅನೇಕರು ಕೆಲಸಕ್ಕೆ ಬಂದಿರಲಿಲ್ಲ. ಮುಷ್ಕರದಲ್ಲಿ ಭಾಗವಹಿಸಿದರೆ ಬಂಧಿಸಿ ಎಂದು ಎರಡನೇ ಬಾರಿ ಹೈಕೋರ್ಟ್‌ ಸೂಚನೆ ನೀಡಿದ ಮೇಲೆ ಅನೇಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಅವರಿಗೆ ತಡವಾಗಿದ್ದಕ್ಕೆ ಕಾರಣ ಕೇಳಲಾಗಿದೆ. ಆದರೆ, ಎರಡನೇ ಬಾರಿಯ ಸೂಚನೆ ಬಳಿಕವೂ ಬಾರದವರಿಗೆ ಬಿಸಿ ಮುಟ್ಟಿಸಲೇಬೇಕಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ನಿಗಮಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿಸ್ತು ಪಾಲನಾ ನಿಯಮಾವಳಿಯಂತೆ ನೋಟಿಸ್‌ ನೀಡುತ್ತಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಮಾಹಿತಿ ನೀಡಿದರು.

ಭಯದ ವಾತಾವರಣ: ‘ಮುಷ್ಕರದಲ್ಲಿ ಪಾಲ್ಗೊಂಡವರಿಗೆ ಕಾರಣ ಕೇಳಿ ನೋಟಿಸ್‌ ಅಷ್ಟೇ ನೀಡಿಲ್ಲ, ಆಪಾದನಾ ಪಟ್ಟಿಯನ್ನೇ ನೀಡಿದ್ದಾರೆ. ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಇದು ಸರಿಯಲ್ಲ’ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.