ADVERTISEMENT

ಕೆಎಸ್‌ಆರ್‌ಟಿಸಿ ಹೊರಗುತ್ತಿಗೆ: 350 ಚಾಲಕರ ನೇಮಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 19:21 IST
Last Updated 31 ಜುಲೈ 2022, 19:21 IST
   

ಬೆಂಗಳೂರು: ₹ 10 ಕೋಟಿ ವೆಚ್ಚ ಭರಿಸಿ 350 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ, ಏಜೆನ್ಸಿ ಮೂಲಕ ನೇಮಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುಂದಾಗಿದೆ.

‘ಸಿಬ್ಬಂದಿಯ ತೀವ್ರ ಕೊರತೆ ಇರುವ ಡಿಪೋಗಳಿಗೆ ಹೊರಗುತ್ತಿಗೆ ಮೂಲಕ ಮೊದಲ ಬಾರಿಗೆ ಸಿಬ್ಬಂದಿ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ. ಟೆಂಡರ್ ಪಡೆದ ಏಜೆನ್ಸಿ ಮಂಗಳೂರಿಗೆ 150, ಪುತ್ತೂರು 100, ರಾಮನಗರ ಮತ್ತು ಚಾಮರಾಜನಗರ ವಿಭಾಗಕ್ಕೆ ತಲಾ 50 ಸಿಬ್ಬಂದಿಯನ್ನು ಪೂರೈಸ ಲಿದ್ದಾರೆ’ ಎಂದು ನಿಗಮದಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಹೊಸತಾಗಿ ಚಾಲಕರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ. ಮಂಗಳೂರು, ಪುತ್ತೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಪ್ರಯಾಣಿಕರ ಬೇಡಿಕೆಯ ಪ್ರಕಾರ ಕನಿಷ್ಠ 1,000 ಹೆಚ್ಚುವರಿ ಚಾಲಕರ ಅಗತ್ಯವಿದೆ’ ಎಂದೂ ಅವರು ತಿಳಿಸಿದರು.

ADVERTISEMENT

‘ತಿಂಗಳಲ್ಲಿ ಕನಿಷ್ಠ 25 ದಿನ ಕರ್ತವ್ಯ ನಿರ್ವಹಿಸಿದ ಚಾಲಕರಿಗೆ ಕ್ರೋಡೀಕೃತ ಸಂಭಾವನೆಯಾಗಿ ₹ 23 ಸಾವಿರ ನೀಡಲಾಗುವುದು. ಚಾಲಕರನ್ನು 25 ದಿನ ಬಳಸಿಕೊಳ್ಳದೇ ಇದ್ದರೆ ಗಂಟೆಗೆ ₹100 ಮತ್ತು ಇತರ ಭತ್ಯೆಗಳನ್ನು ಪಾವತಿಸಲಾಗುವುದು. ಆದರೆ, ಕಾಯಂ ಚಾಲಕರಿಗೆ ನೀಡಲಾಗುವ ಎಲ್ಲ ಭತ್ಯೆಗಳನ್ನು ಹೊರಗುತ್ತಿಗೆ ಚಾಲಕರಿಗೆ ನೀಡುವುದಿಲ್ಲ’ ಎಂದೂ ಅವರು ವಿವರಿಸಿದರು.

‘ಕೆಎಸ್‌ಆರ್‌ಸಿಟಿಯ ಈ ನಡೆ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳಲಿದೆ. ಕೇವಲ ₹ 25 ಸಾವಿರದಲ್ಲಿ ಚಾಲಕ ವೃತ್ತಿಯನ್ನು ನಿರೀಕ್ಷಿಸುವುದು ಎಷ್ಟು ಸರಿ? ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ರೀತಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗೆ ಬದ್ಧತೆಯೂ ಇರದು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ಕಾರ್ಮಿಕರ ಒಕ್ಕೂಟದ ಎಚ್‌.ವಿ. ಅನಂತ ಸುಬ್ಬರಾವ್‌ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.