ಸಿದ್ದರಾಮಯ್ಯ
ಬೆಂಗಳೂರು: ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯ ಶಿಫಾರಸು ಆಧಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಅಧಿಸೂಚನೆ ಹೊರಡಿಸಿದ್ದರೂ, ಹೆಚ್ಚುವರಿ ವೇತನ ಬಾಕಿ ಪಾವತಿಸಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ವಿವಿಧ ನಿಗಮಗಳ ನೌಕರರ ಸಂಘಟನೆಗಳ ಜತೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘2016ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ 12.5 ಹೆಚ್ಚಳ ಮಾಡಲಾಗಿತ್ತು. 2020ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಲಿಲ್ಲ. 2023ರಲ್ಲಿ ಮೂಲವೇತನದಲ್ಲಿ ಶೇಕಡ 15ರಷ್ಟು ಪರಿಷ್ಕರಣೆ ಮಾಡಲಾಗಿತ್ತು. ಸಂಘಟನೆಗಳು ಈ ನಿರ್ಧಾರವನ್ನು ಒಪ್ಪಿಕೊಂಡಿದ್ದವು. ಈಗ 38 ತಿಂಗಳ ವೇತನ ಬಾಕಿ ನೀಡಬೇಕು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.
ಸಮಿತಿಯು 2022ರ ಜನವರಿ 1ರಿಂದ 2023ರ ಫೆಬ್ರುವರಿ 28ರವರೆಗೆ ವೇತನ ಬಾಕಿ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳೂ ಅಂದು ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಎಲ್ಲ ಸಂಘಟನೆಗಳೂ ಒಪ್ಪಿಕೊಳ್ಳಬೇಕು. ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಹಾಗಾಗಿ, ಮುಷ್ಕರವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು), ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯೀಸ್ ಯೂನಿಯನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಗಳು ಮುಖಂಡರು ಭಾಗವಹಿಸಿದ್ದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.