ADVERTISEMENT

KSRTC Strike: ಸಾರಿಗೆ ಮುಷ್ಕರವೋ ಸಂಧಾನವೋ?

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 0:20 IST
Last Updated 3 ಆಗಸ್ಟ್ 2025, 0:20 IST
ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು (ಸಾಂದರ್ಭಿಕ ಚಿತ್ರ)
ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ವೇತನ ಪರಿಷ್ಕರಣೆ ಮಾಡಬೇಕು, ಹಿಂಬಾಕಿ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಪಟ್ಟು ಹಿಡಿದಿದ್ದು, ಆ.5ರಿಂದ ಮುಷ್ಕರ ನಡೆಸಲು ನಿರ್ಧರಿಸಿದೆ. ಹಿಂಬಾಕಿಯೂ ಇಲ್ಲ, 2027ರವರೆಗೆ ವೇತನ ಪರಿಷ್ಕರಣೆಯೂ ಇಲ್ಲ ಎಂದು ಸರ್ಕಾರವೂ ಸಡ್ಡು ಹೊಡೆದಿದೆ.

ಈ ನಡುವೆ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.4ರಂದು ಮಾತುಕತೆಗೆ ಕರೆದಿದ್ದಾರೆ. ಜೊತೆಗೆ, ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡುವುದಕ್ಕೂ ಸರ್ಕಾರ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾರ್ಮಿಕ ಸಂಘಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆಗಳು ನಿಗಮಕ್ಕೆ ಅನ್ವಯವಾಗುತ್ತಿದ್ದು, 1996 ರಲ್ಲಿ ನಡೆದ ಒಪ್ಪಂದದಂತೆ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಯಬೇಕು. 2020ರಿಂದ ಅನ್ವಯವಾಗುವಂತೆ 2023ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಿರಲಿಲ್ಲ. 2024ಕ್ಕೆ ಮತ್ತೆ ವೇತನ ಪರಿಷ್ಕರಣೆಯಾಗಬೇಕಿತ್ತು. ಅದನ್ನೂ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಲು ನಿರ್ಧರಿಸಲಾಗಿತ್ತು. ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರಿಂದ ಮುಷ್ಕರ ಕೈಬಿಡಲಾಗಿತ್ತು. ಈಗ ವರಸೆ ಬದಲಾಯಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ದೂರಿದ್ದಾರೆ.

ADVERTISEMENT

ಮುಷ್ಕರ ದಿನ ಬೆಂಗಳೂರಿನಲ್ಲಿ 4 ಸಾವಿರ, ರಾಜ್ಯದ ವಿವಿಧೆಡೆ 7 ಸಾವಿರ ಖಾಸಗಿ ಬಸ್‌ಗಳು ಸಂಚರಿಸಲಿವೆ. ಸಭೆಯಲ್ಲಿ ಹೆಚ್ಚುವರಿ ಸಾರಿಗೆ ಆಯುಕ್ತರಾದ ಸಿ. ಮಲ್ಲಿಕಾರ್ಜುನ, ಬಿ.ಪಿ. ಉಮಾಶಂಕರ್‌, ಶೋಭಾ, ಖಾಸಗಿ ಬಸ್‌ ಸಂಘಟನೆಗಳ ಮುಖಂಡರಾದ ನಟರಾಜ ಶರ್ಮ, ರಾಧಾಕೃಷ್ಣ ಹೊಳ್ಳ, ಶಿವಣ್ಣ ಮುಂತಾದವರು ಪಾಲ್ಗೊಂಡಿದ್ದರು.

‘2023ರಿಂದ ಪರಿಷ್ಕರಣೆಯಾಗಿ ರುವುದರಿಂದ ಹಿಂಬಾಕಿ ನೀಡುವುದಿಲ್ಲ. ನಾಲ್ಕು ವರ್ಷ ಪರಿಷ್ಕರಣೆ ಇಲ್ಲ ಎಂದು ಈಗ ಹೇಳುವ ಬದಲು ನಾವು ಪ್ರತಿಭಟನೆ ನಡೆಸಿದಾಗ, ಹಿಂದೆ ಮುಷ್ಕರಕ್ಕೆ ಕರೆ ನೀಡಿದ್ದ ಸಂದರ್ಭದಲ್ಲಿ ತಿಳಿಸಬೇಕಿತ್ತು. 2023ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಪ್ಪಂದದಲ್ಲಿ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸಬೇಕು. ಅದನ್ನು ಬಿಟ್ಟು ಯಾವುದೇ ಒಪ್ಪಂದ ಇಲ್ಲ ಎನ್ನುವುದು ಸರಿಯಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಸಿದ್ದರಾಮಯ್ಯರಿಂದ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯಾವುದೋ ವಿದೇಶಿ ಕಂಪನಿಗೆ ₹8,000 ಕೋಟಿ ನೀಡಲು ಇವರಲ್ಲಿ ದುಡ್ಡಿದೆ. ದುಡಿಯುವ ಕಾರ್ಮಿಕರಿಗೆ ಹಿಂಬಾಕಿ ₹ 1,800 ಕೋಟಿ ನೀಡಲು ಕಷ್ಟವಾಗಿದೆ. ಸರ್ಕಾರದ ಯಾವುದೇ ಭರವಸೆಗಳನ್ನು ನಾವು ಒಪ್ಪುವುದಿಲ್ಲ. ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲವೇ ಮುಷ್ಕರ ಎದುರಿಸಬೇಕು. ಇದೇ ನಮ್ಮ ಅಂತಿಮ ತೀರ್ಮಾನ’ ಎಂದು ಅನಂತಸುಬ್ಬರಾವ್‌ ತಿಳಿಸಿದ್ದಾರೆ.

ಸರ್ಕಾರದ ನಿಲುವು: ‘2020ರಲ್ಲಿ ನಡೆಯಬೇಕಿದ್ದ ಪರಿಷ್ಕರಣೆಯು ಕೋವಿಡ್‌ನ ಕಾರಣದಿಂದ ಮುಂದಕ್ಕೆ ಹೋಗಿತ್ತು. ಪರಿಷ್ಕರಣೆ ಮೂರು ವರ್ಷ ತಡವಾದ ಕಾರಣಕ್ಕಾಗಿಯೇ ಆರ್ಥಿಕ ನಿಯಮಾವಳಿಗಳ ಪ್ರಕಾರ 2023ರಲ್ಲಿ ಶೇ 15ರಷ್ಟು ಏರಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರಿಗೂ ಈ ಮಟ್ಟದ ವೇತನ ಏರಿಕೆ ನೀಡಿಲ್ಲ. ಹಿಂದೆ ಮಾಡಿಕೊಂಡ ಒಪ್ಪಂದದ ಆದೇಶದ ಪ್ರಕಾರ 2027ರವರೆಗೆ ಪರಿಷ್ಕರಣೆಗೆ ಅವಕಾಶವಿಲ್ಲ’ ಎಂಬುದು ಸರ್ಕಾರದ ವಾದವಾಗಿದೆ.

‘2023ರ ಆದೇಶದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು, ದಿನಾಂಕ 17-03-2023 ರಲ್ಲಿ ‘ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950 ರ ಸೆಕ್ಷನ್ 34(1l ರನ್ವಯ ದಿನಾಂಕ: 1.03.2023 ರಿಂದ ಜಾರಿಗೆ ಬರುವಂತೆ’ ಎಂದು ನಮೂದಾಗಿದೆ. 2020 ರಿಂದ ಜಾರಿಗೆ ಬರುವಂತೆ ಎಂದು ಆದೇಶದಲ್ಲಿ ತಿಳಿಸಿಲ್ಲ. ಇದುವೇ ಎಲ್ಲ ಗೊಂದಲಗಳಿಗೆ ಕಾರಣ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಎಕ್ಸ್‌’ನಲ್ಲಿ ಹೇಳಿಕೆ ಹಂಚಿಕೊಂಡಿದ್ದಾರೆ.

11 ಸಾವಿರ ಖಾಸಗಿ ಬಸ್‌ ಬಳಕೆ

ಮುಖ್ಯಮಂತ್ರಿಯವರು ನಡೆಸುವ ಮಾತುಕತೆ ವಿಫಲವಾಗಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರ ಆರಂಭಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು 11 ಸಾವಿರ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿವೆ.

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಸ್‌. ಯೋಗೀಶ್‌ ಅಧ್ಯಕ್ಷತೆಯಲ್ಲಿ ವಿವಿಧ ಖಾಸಗಿ ಬಸ್‌ ಮಾಲೀಕರ ಸಂಘಗಳೊಂದಿಗೆ ಶನಿವಾರ ಸಭೆ ನಡೆದಿದೆ.

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ವಿವಿಧ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಂಡಿದ್ದು, ‘ಪರ್ಮಿಟ್‌ ಸಮಸ್ಯೆ, ತೆರಿಗೆ ರಿಯಾಯಿತಿ ಸೇರಿದಂತೆ ನಮ್ಮ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಮುಷ್ಕರ ದಿನ ಖಾಸಗಿ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ನಿಗಮಗಳ ಬಸ್‌ಗಳ ಸಂಚಾರ ಮಾರ್ಗದಲ್ಲಿ ಓಡಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಕರ್ನಾಟಕದ ಮೋದಿ

‘ಕೇಂದ್ರದಲ್ಲಿ ಪ್ರಧಾನಿಯ ಎದುರು ಯಾರೂ ಧ್ವನಿ ಎತ್ತಿ ಮಾತನಾಡುತ್ತಿಲ್ಲ. ಅದೇ ರೀತಿ ಸಿದ್ದರಾಮಯ್ಯ ಕರ್ನಾಟಕದ ಮೋದಿಯಾಗಿದ್ದಾರೆ. ಅವರ ವಿರುದ್ಧವೂ ಯಾರೂ ಮಾತನಾಡುವಂತಿಲ್ಲ. ಬಾಯಿ ಮುಚ್ಚಿಸುತ್ತಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಳ್ಳೆಯ ಮನುಷ್ಯ. ಅವರ ಮಾತು ನಡೆಯುತ್ತಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.