ADVERTISEMENT

ಕುಕ್ಕೆ ಸುಬ್ರಹ್ಮಣ್ಯಗೆ ಸ್ವಂತ ನಿಧಿಯಿಂದಲೇ ‘ಚಿನ್ನದ ರಥ’!

ರಾಜೇಶ್ ರೈ ಚಟ್ಲ
Published 19 ಮೇ 2019, 20:30 IST
Last Updated 19 ಮೇ 2019, 20:30 IST
   

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಿಶ್ಚಿತ ಠೇವಣಿಯಲ್ಲಿರುವ (ಎಫ್‌ಡಿ) ₹ 299.55 ಕೋಟಿ ಮೊತ್ತದಲ್ಲಿ ₹ 80 ಕೋಟಿ ಬಳಸಿಕೊಂಡು ಚಿನ್ನದ ರಥ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ.

ಕಂದಾಯ ಇಲಾಖೆಯ (ಮುಜರಾಯಿ) ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಹಿಂಪಡೆದ ಬೆನ್ನಲ್ಲೆ, ಆದೇಶ ಹೊರಡಿಸಲಾಗುವುದು ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನಿರ್ಮಾಣಕ್ಕೆ ದೇವಸ್ಥಾನದಲ್ಲಿ ಲಭ್ಯವಿರುವ ಚಿನ್ನ ಮತ್ತು ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ದೇವಾಲಯದ ನಿಧಿಯಿಂದ ಭರಿಸಲು ಉದ್ದೇಶಿಸಿರುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ. ಹೀಗಾಗಿ, ಈ ಪ್ರಸ್ತಾವ ಒಪ್ಪಬಹುದು’ ಎಂದು ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟಿದೆ.

ADVERTISEMENT

240 ಕೆ.ಜಿ ಚಿನ್ನದಿಂದ ಅಂದಾಜು ₹ 15 ಕೋಟಿ ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು 2005ರ ಆಗಸ್ಟ್‌ 8ರಂದು ಸರ್ಕಾರ ಆದೇಶ ಹೊರಡಿಸಿತ್ತು. ನಿರ್ಮಾಣ ಗುತ್ತಿಗೆ ವಹಿಸಿದ್ದ ಶಿಲ್ಪಿ ಕೋಟೇಶ್ವರ ಲಕ್ಷ್ಮಿನಾರಾಯಣ ಆಚಾರ್ಯ ಅವರು ಮರ ಬಳಸಿ ಮಾದರಿ ರಥವನ್ನು ರೂಪಿಸುವ ಕೆಲಸವನ್ನೂ ಮಾಡಿದ್ದರು.

ಆದರೆ, ಅಂದಾಜು ವೆಚ್ಚ ಲೆಕ್ಕ ಹಾಕುವ ಸಂದರ್ಭದಲ್ಲಿ ಒಂದು ಗ್ರಾಂ ಚಿನ್ನಕ್ಕೆ ₹ 600 ಇತ್ತು. ರಥ ನಿರ್ಮಾಣ ಪ್ರಸ್ತಾವಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಗಲು ವಿಳಂಬವಾಗಿದ್ದರಿಂದ ಮತ್ತು ಚಿನ್ನದ ಹೊದಿಕೆ ಹೊದಿಸುವ ಅವಧಿಯಲ್ಲಿ ಬೆಲೆ ಗ್ರಾಂ ಒಂದಕ್ಕೆ ₹ 1,100ಕ್ಕೆ ಏರಿಕೆಯಾಗಿತ್ತು. ಹೀಗಾಗಿ, ಅಂದಾಜು ವೆಚ್ಚವೂ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ₹ 180 ಕೋಟಿ ವೆಚ್ಚದಲ್ಲಿ ದೇವಾಲಯದ ಸಮಗ್ರ ಅಭಿವೃದ್ಧಿ ಕಾಮಗಾರಿಗೂ ಸರ್ಕಾರ ಒಪ್ಪಿಗೆ ನೀಡಿತ್ತು.

ದೇವಸ್ಥಾನದ ನಿಧಿಯಿಂದ ಚಿನ್ನದ ರಥ ನಿರ್ಮಿಸಿದರೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಬಹುದೆಂಬ ಕಾರಣಕ್ಕೆ, ಭಕ್ತರಿಂದ ದೇಣಿಗೆ ಸಂಗ್ರಹಿಸಿ ರಥ ನಿರ್ಮಿಸಲು ಸರ್ಕಾರ ಆದೇಶ ನೀಡಿತ್ತು. ಆದರೆ, ಈ ಅವಧಿಯಲ್ಲಿ ದಾನಿಗಳಿಂದ ಕೇವಲ 93.20 ಗ್ರಾಂ ಚಿನ್ನ ಮಾತ್ರ ಕಾಣಿಕೆಯಾಗಿ ಬಂದಿತ್ತು.

ಈಗ ದೇವಸ್ಥಾನ ಆರ್ಥಿಕವಾಗಿ ಸದೃಢವಾಗಿದೆ. ಹೀಗಾಗಿ ದೇವಾಲಯದ ನಿಧಿಯಿಂದಲೇ ರಥದ ಕಾಮಗಾರಿ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಮರದ ರಥ ನಿರ್ಮಿಸಿದ್ದ ಲಕ್ಷ್ಮಿನಾರಾಯಣ ಆಚಾರ್ಯ ಅವರಿಗೇ ಚಿನ್ನದ ರಥ ನಿರ್ಮಿಸುವ ಕೆಲಸ ವಹಿಸಲು ನಿರ್ಣಯಿಸಲಾಗಿದೆ. ಅವರಿಗೆ, ಪ್ರತಿ ಕಿಲೋ ಚಿನ್ನಕ್ಕೆ ₹ 72 ಸಾವಿರ ರಥ ನಿರ್ಮಾಣದ ವೆಚ್ಚ (ಮೇಕಿಂಗ್‌ ಚಾರ್ಜ್‌) ಪಾವತಿಸಲು ಕರ್ನಾಟಕ ಪಾರದರ್ಶಕ ಕಾಯ್ದೆಯಡಿ 4 ಜಿ ನೀಡಲು ತೀರ್ಮಾನಿಸಲಾಗಿದೆ.

‘ದೇವಸ್ಥಾನದ ನಿಧಿಯಲ್ಲಿ ರಥ ನಿರ್ಮಿಸಲು ಸಾಕಷ್ಟು ಮೊತ್ತ ಲಭ್ಯ ಇರುವುದರಿಂದ ಇದೇ ಏ. 29ರಂದು ನಡೆದ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ಯೋಜನೆಗೆ ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.

ದೇಶದಲ್ಲೇ ಈ ರಥ ವಿಶಿಷ್ಟವೆನಿಸಲಿದೆ’

‘ಈ ರಥ ದೇಶದಲ್ಲೇ ವಿಶಿಷ್ಟವೆನಿಸಲಿದೆ. ಈ ಹಿಂದೆ, ದೇವಸ್ಥಾನದಲ್ಲಿ ನಡೆದ ಅಷ್ಟ ಮಂಗಲ ಪ್ರಶ್ನೆಯಲ್ಲೂ ಚಿನ್ನದ ರಥ ನಿರ್ಮಿಸುವಂತೆ ಸುಬ್ರಹ್ಮಣ್ಯನ (ದೇವರ) ಇಚ್ಛೆ ಕಂಡುಬಂದಿತ್ತು. 2006ರಲ್ಲೇ ₹ 78.20 ಲಕ್ಷಕ್ಕೆ ರಥದ ಕೆಲಸವನ್ನು ದೇವಸ್ಥಾನದ ಸಮಿತಿ ನಮಗೆ ವಹಿಸಿತ್ತು. ರಥ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಮರದ ರಥ ನಿರ್ಮಾಣಕ್ಕೆ ₹ 97,564 ವೆಚ್ಚವಾಗಿತ್ತು. ಈ ಮೊತ್ತದಲ್ಲಿ ₹ 89,777 ಮೊತ್ತ ಪಾವತಿಯೂ ಆಗಿದೆ’ ಎಂದು ಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ಅವರ ಪುತ್ರ ರಾಜಗೋಪಾಲ ಆಚಾರ್ಯ ತಿಳಿಸಿದರು.

‘ರಥ ನಿರ್ಮಾಣಕ್ಕೆ ಅಗತ್ಯವಾದ ಅತಿ ಸೂಕ್ಷ್ಮ ಕುಸುರಿ ಕೆಲಸ ಮತ್ತು ತೂಕ ಯಂತ್ರ ಮತ್ತಿತರ ಸಲಕರಣೆಗಳನ್ನು ₹ 13 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದೆವು. ಚಿನ್ನದ ಬೆಲೆ ಏಕಾಏಕಿ ಹೆಚ್ಚಿದ್ದರಿಂದ ಯೋಜನೆಯನ್ನು ಅಂದು ಕೈಬಿಡಲಾಗಿತ್ತು. ಅಂದು ಗ್ರಾಂಗೆ ₹ 30ರಂತೆ (ಮೇಕಿಂಗ್‌ ಚಾರ್ಜ್‌) ನಿಗದಿಯಾಗಿತ್ತು. ಈಗ, ₹ 70ರವರೆಗೆ ಹೆಚ್ಚಳವಾಗುತ್ತದೆ. ನಮ್ಮ ಆರಾಧ್ಯ ದೇವರಿಗೆ ರಥ ನಿರ್ಮಿಸುವುದು ಹೆಮ್ಮೆ’ ಎಂದರು.

‘ಮುಂದಿನ ಆರು ತಿಂಗಳಲ್ಲಿ ಚಿನ್ನದ ರಥ ನಿರ್ಮಿಸುವ ಕೆಲಸ ಪೂರ್ಣಗೊಳಿಸುತ್ತೇವೆ’ ಎಂದೂ ವಿವರಿಸಿದರು.

***
ಸುಬ್ರಮಣ್ಯ ದೇವರ ಸ್ವರ್ಣ ರಥೋತ್ಸವ ನೋಡಬೇಕೆನ್ನುವುದು ಭಕ್ತಾದಿಗಳ ಬಹಳ ವರ್ಷಗಳ ಬೇಡಿಕೆ. ಇದೀಗ ನನಸಾಗುವ ದಿನ ಹತ್ತಿರ ಬಂದಿದೆ.
- ನಿತ್ಯಾನಂದ ಮುಂಡೋಡಿ, ಅಧ್ಯಕ್ಷ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.