ADVERTISEMENT

ಪ್ರಸಾದ ಸುರಕ್ಷತೆಗೆ ಕುಕ್ಕೆ ಆಡಳಿತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 17:45 IST
Last Updated 19 ಡಿಸೆಂಬರ್ 2018, 17:45 IST

ಸುಬ್ರಹ್ಮಣ್ಯ: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ದುರ್ಘಟನೆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಸುರಕ್ಷತೆ ಕ್ರಮಗಳನ್ನು ಜಾರಿಗೆ ತರಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.

ಅನ್ನಪ್ರಸಾದ ಸಿದ್ಧಪಡಿಸುವ ಅಡುಗೆ ತಯಾರಿ ಕೊಠಡಿ, ಕಚ್ಛಾ ಹಾಗೂ ಸಿದ್ಧ ಆಹಾರ ಶೇಖರಣೆ ಕೊಠಡಿ, ಹಾಗೂ ಭಕ್ತರಿಗೆ ವಿತರಿಸುವ ಲಡ್ಡು ಪಂಚಕಜ್ಜಾಯ, ಇತ್ಯಾದಿ ತಯಾರಿ ಹಾಗೂ ವಿತರಣೆ ಶೇಖರಣ ಕೊಠಡಿಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ಜಾರಿಗೆ ತರಲು ಅದು ನಿರ್ಧರಿಸಿದೆ. ಈ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕೂಡ ಕಡ್ಡಾಯವಾಗಿ ನಿಷೇಧಿಸಿದೆ. ಆಹಾರ ತಯಾರಿ ಮತ್ತು ಶೇಖರಣೆ ಸಂಗ್ರಹ ಸಂದರ್ಭ ಸುರಕ್ಷಾ ಕಾಯ್ದೆಯ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

‘ನೈವೇದ್ಯ ಮತ್ತು ದಾಸೋಹಕ್ಕಾಗಿ ಇರುವ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದ ಕಡೆ ತಕ್ಷಣವೇ ಕ್ಯಾಮೆರಾ ಅಳವಡಿಕೆಗೆ ಆಡಳಿತ ಮುಂದಾಗಿದೆ. ಪರಿಸರದಲ್ಲಿ ಪೂರ್ವಾನುಮತಿ ಪಡೆಯದೆ ಭಕ್ತರೇ ಪ್ರಸಾದ ತಯಾರಿಸಿ ವಿತರಿಸದಂತೆ ಎಚ್ಚರ ವಹಿಸಲಿದೆ. ದೇವಸ್ಥಾನದ ವಿವಿದ ಕಡೆಗಳಿಗೆ ಅಳವಡಿಸಲು 54 ಸಿ.ಸಿ. ಟಿವಿ ಕ್ಯಾಮರಾ ಗಳ ಬೇಡಿಕೆ ಪ್ರಸ್ತಾಪವನ್ನು ಅನುಮೋದನೆಗೆ ಕಳುಹಿಸಲಾಗಿದೆ’ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.