ಬೆಂಗಳೂರು: ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಿದರೂ ನಮ್ಮ ಸಹಕಾರ ಇದೆ’ ಎಂದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
‘ಇತರ ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ನಮ್ಮ ರಾಜ್ಯದಲ್ಲೂ ಅಧ್ಯಕ್ಷರ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ವರಿಷ್ಠರು ಯಾರನ್ನು ನೇಮಿಸಿದರೂ ಅದಕ್ಕೆ ನಮ್ಮ ಒಪ್ಪಿಗೆ ಇದೆ. ಅವರ ತೀರ್ಮಾನಕ್ಕೆ ಬದ್ಧ’ ಎಂದು ಅವರು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
‘ಹಾಲಿ ಅಧ್ಯಕ್ಷರು ಚುನಾವಣೆ ಮೂಲಕ ಆಯ್ಕೆ ಆದವರಲ್ಲ. ಅವರಿಗೆ ಯಾವುದೇ ಪ್ರಮಾಣ ಪತ್ರವನ್ನೂ ಕೊಟ್ಟಿಲ್ಲ. ಅವರು ಹಂಗಾಮಿ ಅಧ್ಯಕ್ಷರಷ್ಟೇ. ಈಗ ಮಾತನಾಡುವ ಸಮಯ ಹೀಗಾಗಿ ಮಾತನಾಡಿದ್ದೇವೆ’ ಎಂದು ಅವರು ಹೇಳಿದರು.
ನಮ್ಮ ಹೋರಾಟಕ್ಕೆ ಗೆಲುವು:
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲು ಹತ್ತಿದೆವು. ಅಂತಿಮವಾಗಿ ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ’ ಎಂದು ಅವರು ಹೇಳಿದರು.
‘ಪ್ರಕರಣವನ್ನು ಸಿಬಿಐಗೆ ಕೊಟ್ಟ ತಕ್ಷಣ ಎಲ್ಲ ಮುಗಿದಿಲ್ಲ. ಈಗ ಆರಂಭ ಅಷ್ಟೇ, ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ ಜನರ ತೆರಿಗೆ ಹಣ ಮತ್ತು ದುಡಿಮೆಯ ಹಣ ದುರುಪಯೋಗ ಆಗಿದೆ. ನಿಗಮದ ಹಣ ಚುನಾವಣೆಗೆ ಬಳಕೆಯಾಗಿದೆ. ಬಳಸಿಕೊಂಡವರಿಗೂ ತಕ್ಕ ಶಾಸ್ತಿ ಆಗಬೇಕು. ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ಪರವಾಗಿ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ನಾನು ಸಹಿ ಹಾಕಿ ಪ್ರಕರಣ ದಾಖಲಿಸಿದ್ದೆವು’ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
‘ಈ ಹಗರಣದಲ್ಲಿ ವಾಲ್ಮೀಕಿ ಸಮಾಜದ ಜನರಿಗೆ ನ್ಯಾಯ ಸಿಗಬೇಕಾಗಿದೆ. ಪಕ್ಷದಿಂದ ಇನ್ನಷ್ಟು ಸಹಕಾರ ಸಿಕ್ಕಿದ್ದರೆ, ಈ ಪ್ರಕರಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಒಯ್ಯಲು ಸಾಧ್ಯವಿತ್ತು. ಪಕ್ಷದೊಳಗಿನ ಗೊಂದಲದಿಂದ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗಲಿಲ್ಲ’ ಎಂದು ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.