ADVERTISEMENT

ಗುತ್ತಿಗೆದಾರರಿಗೆ ಕಿರುಕುಳ ನೀಡಿ ಕಮಿಷನ್ ವಸೂಲಿ: ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 10:50 IST
Last Updated 26 ಆಗಸ್ಟ್ 2022, 10:50 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಮೈಸೂರು: ‘ಈ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಕಿರುಕುಳ ನೀಡಿ ಕಮಿಷನ್‌ ವಸೂಲಿ ಮಾಡಲಾಗುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪರ್ಸಂಟೇಜ್‌ ವ್ಯವಸ್ಥೆ ಸ್ವಾತಂತ್ರ್ಯ ಪೂರ್ವದಲ್ಲೂ ಇತ್ತು. ಆದರೆ, ಒಂದು ಮಿತಿ ಇತ್ತು. 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಪ್ರಮಾಣ ಜಾಸ್ತಿಯಾಯಿತು’ ಎಂದು ಆರೋಪಿಸಿದರು.

‘ಈಗ ಸರ್ಕಾರದ ವಿರುದ್ಧ ದನಿ ಎತ್ತಿರುವ ಗುತ್ತಿಗೆದಾರರು 6 ತಿಂಗಳು ಸರ್ಕಾರಿ ಟೆಂಡರ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕರಿಸಲಿ’ ಎಂದು ಸಲಹೆ ನೀಡಿದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದಾಗ ಕಮಿಷನ್ ಕೇಳಿರಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಶಾಸಕರ ಮಟ್ಟದಲ್ಲೇ ಶುರುವಾಯಿತು. ಶಾಸಕರೇ ಬೆಟ್ಟ–ಗುಡ್ಡ ಗುತ್ತಿಗೆ ಪಡೆದು ಕ್ರಷರ್ ಶುರು ಮಾಡಿದ್ದಾರೆ. ಇದೆಲ್ಲ ಶುರುವಾಗಿದ್ದು ಬಿಜೆಪಿ ಸರ್ಕಾರದಲ್ಲಿ. ನನ್ನ ಆಡಳಿತದಲ್ಲೂ ಕೆಲ ಇಲಾಖೆಯಲ್ಲಿ ಪರ್ಸಂಟೇಜ್‌ ಪಡೆದಿದ್ದಾರೆ‌. ಇದಕ್ಕೆ ನಮ್ಮ ಪಕ್ಷದವರು ಸಚಿವರಾಗಿದ್ದ ಇಲಾಖೆಗಳಲ್ಲಿ ಅವಕಾಶ ಕೊಟ್ಟಿರಲಿಲ್ಲ. ಇದು ನಮ್ಮ ಇಲಾಖೆ, ನಮ್ಮ ಮೇಲೆ ಹಿಡಿತ ಸಲ್ಲದು ಎಂದು ಕಾಂಗ್ರೆಸ್‌ನವರು ಸಮ್ಮಿಶ್ರ ಸರ್ಕಾರವಿದ್ದಾಗ ಪದೇ ಪದೇ ಹೇಳುತ್ತಿದ್ದರು. ಹೀಗಾಗಿ, ಪರ್ಸಂಟೇಜ್‌ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ’ ಎಂದರು.

‘2008ರಿಂದ ವ್ಯವಸ್ಥೆ ಕುಲಗೆಡಿಸಿದವರು ಬಿಜೆಪಿಯವರು. ಅವರಿಗೆ ಆತ್ಮಸಾಕ್ಷಿಗಿಂತ ಸಾಕ್ಷಿ ಬೇಕಾ?’ ಎಂದು ಕೇಳಿದರು.

‘ಲಾಟರಿ ನಿಷೇಧಿಸದಂತೆ ನನ್ನ ಮೇಲೆ ಒತ್ತಡ ತಂದಿದ್ದರು. ಆಫರ್‌ಗಳನ್ನು ಮಾಡಿದ್ದರು. ಹೈಕಮಾಂಡ್‌ಗೆ ಹಣ ಕಳುಹಿಸುವ ಪ್ರಕ್ರಿಯೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲೂ ಇದೆ’ ಎಂದು ದೂರಿದರು.

‘ನಾವು ಆಡಳಿತದಲ್ಲಿದ್ದಾಗ ಯಾವ ಅಧಿಕಾರಿಗಳ ಬಳಿಯೂ ಹಣ ಕೇಳಿಲ್ಲ. ಹೀಗಾಗಿ, ಸರ್ಕಾರದ ಕಡತಗಳು ಬೇಗ ಸಿಗುತ್ತಿವೆ’ ಎಂದರು.

‘ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆಯೇನೂ ಇಲ್ಲ. ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಪದೇ ಪದೇ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದೇವೆಯೇ ಹೊರತು ಬೇರೇನೂ ಇಲ್ಲ. ಅವರು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ನಾನು ಪಕ್ಷ ಅಧಿಕಾರಕ್ಕೆ ತರಲು ಹೊರಟಿದ್ದೇನೆ. ನಾವು ಚುನಾವಣೆಯಲ್ಲಿ ಎದುರಾಳಿಗಳಷ್ಟೆ; ವೈರಿಗಳೇನಲ್ಲ. ಅವರು ಮುಖ್ಯಮಂತ್ರಿ ಆಗುವುದು ಭಗವಂತನ ಇಚ್ಛೆ. ನಾನು ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿ ಆಗಿರಲಿಲ್ಲವೇ? ಚಾಮುಂಡೇಶ್ವರಿ ಆಶೀರ್ವಾದವಿದ್ದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದರು.

‘ಶಾಸಕ ಜಿ.ಟಿ.ದೇವೇಗೌಡ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಏನೂ ಸಮಸ್ಯೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.