ADVERTISEMENT

ಬಿಜೆಪಿ ರಕ್ಷಣೆಗೆ ನಿಂತು ಎಚ್‌ಡಿಕೆಯಿಂದ ಕೋಮುವಾದಕ್ಕೆ ಬೆಂಬಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 10:31 IST
Last Updated 27 ಅಕ್ಟೋಬರ್ 2019, 10:31 IST
   

ಬೆಂಗಳೂರು: ಬಿಜೆಪಿ ಸರ್ಕಾರ ಉರುಳಲು ನಾನು ಅವಕಾಶ ನೀಡುವುದಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕೋಮುವಾದಿಗಳನ್ನು ಅವರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಕುಮಾರಸ್ವಾಮಿ ಈ ಹಿಂದೆ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದವರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ಹೇಳಿಕೆ ಗಮನಿಸಿದರೆ ಬಿಜೆಪಿಯನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ. ಕೋಮುವಾದಿಗಳನ್ನು ಅವರು ಬೆಂಬಲಿಸುತ್ತಿದ್ದಾರೆ,’ ಎಂದರು.

‘ನಾನು ಬಿಜೆಪಿ ಸರ್ಕಾರವನ್ನು ಉರುಳಿಸುತ್ತೇನೆ ಎಂದು ಹೇಳಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನಗಳಲ್ಲಿ ಗೆದ್ದರೆ ಬಿಜೆಪಿ ಸರ್ಕಾರ ಉರುಳುತ್ತದೆ. ಆಗ ನಾವು ಚುನಾವಣೆಗೆ ಹೋಗುತ್ತೇವೆ,‘ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಮಹಾರಾಷ್ಟ್ರ, ಹರಿಯಾಣದಲ್ಲಿ ಬಹುತೇಕ ಪಕ್ಷಾಂತರಿಗಳು ಸೋತ ಹಿನ್ನೆಲೆಯಲ್ಲಿ ಫಲಿತಾಂಶದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ಪಕ್ಷಾಂತರಿಗಳಿಗೆ ಗೆಲುವು ಸಿಗುವುದಿಲ್ಲ ಎಂಬುದು ಈ ಎರಡು ರಾಜ್ಯಗಳ ಚುನಾವಣೆಯಲ್ಲಿ ಗೊತ್ತಾಗಿದೆ. ರಾಜ್ಯದ ಉಪ ಚುನಾವಣೆಯಲ್ಲೂ ಪಕ್ಷಾಂತರಿಗಳು ಸೋಲಲಿದ್ದಾರೆ. ಕಾಂಗ್ರೆಸ್‌ 15ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಕಾಂಗ್ರೆಸ್‌ ಮತ್ತೊಮ್ಮೆ ಜೆಡಿಎಸ್‌ ಜತೆಗೆ ಸಮ್ಮಿಶ್ರ ಸರ್ಕಾರ ಮಾಡದೇ ನೇರವಾಗಿ ಚುನಾವಣೆಗೆ ಹೋಗಲಿದೆ,’ ಎಂದು ಹೇಳಿದ್ದರು.

ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಶನಿವಾರ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ‘ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರು ಸರ್ಕಾರ ಬೀಳುತ್ತದೆ ಎಂದು ಪದೇಪದೇ ಹೇಳುತ್ತಿದ್ದಾರೆ. ಆದರೆ, ಈ ಸರ್ಕಾರ ಬೀಳುವುದಿಲ್ಲ. ಸರ್ಕಾರವನ್ನು ಉಳಿಸುವುದು ಹಾಗೂ ಉರುಳಿಸುವುದು ನನ್ನ ಕೈಯಲ್ಲಿದೆ. ಸರ್ಕಾರವನ್ನು ಬೀಳಿಸುವ ಯಾವ ಆತುರವೂ ನನಗಿಲ್ಲ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.