ADVERTISEMENT

ಕುಂಭಮೇಳ: ಶಾಶ್ವತ ಅಭಿವೃದ್ಧಿ ಕಾಮಗಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:30 IST
Last Updated 23 ಜನವರಿ 2019, 19:30 IST
   

ಬೆಂಗಳೂರು: ತಿ. ನರಸೀಪುರದತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ. 17, 18 ಮತ್ತು 19 ರಂದು ನಡೆಯಲಿರುವ ಕುಂಭಮೇಳದ ಪ್ರದೇಶದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿ ಈ ಸಂಬಂಧ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಕುಂಭಮೇಳದ ಹೆಸರಿನಲ್ಲಿ ಆ ಪ್ರದೇಶದ ಅಭಿವೃದ್ಧಿ ಆಗಬೇಕು. ಜನರಿಗೆ ಅನುಕೂಲಕರವಾದ ಸೌಲಭ್ಯ ಸಿಗಬೇಕು. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೇಕಾದ ಮೂಲಸೌಲಭ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

‘ಕುಂಭಮೇಳಕ್ಕೆ ಹಣಕಾಸಿನ ಕೊರತೆ ಇಲ್ಲ. ಮೊದಲು ಸರಿಯಾದ ಯೋಜನೆ ರೂಪಿಸಿ. ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ. ಕುಂಭಮೇಳ ನಡೆಯುವ ಉತ್ತರ ಭಾರತದ ಪ್ರದೇಶಗಳಿಗೆ ಇಲ್ಲಿನ ಇಬ್ಬರು ಅಧಿಕಾರಿಗಳನ್ನು ಕಳುಹಿಸಿ ಅಧ್ಯಯನ ಮಾಡಬೇಕು. ಅಲ್ಲಿನ ಮಾದರಿ ನೋಡಿಕೊಂಡು ಅದಕ್ಕಿಂತಲೂ ಉತ್ತಮ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟ, ಸೋಪಾನಗಳ ನಿರ್ಮಾಣ, ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ಕುಟೀರಗಳ ನಿರ್ಮಾಣ ಆಗಬೇಕು. ಸಾರಿಗೆ, ಸುರಕ್ಷತೆ, ಪ್ರಚಾರ ಕಾರ್ಯಗಳು ವ್ಯವಸ್ಥಿತವಾಗಿ ಆಗಬೇಕು. ಉತ್ತರ ಭಾರತದ ಜನರೂ ಮೇಳದಲ್ಲಿ ಭಾಗವಹಿಸುವಂತಾಗಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್‌ ವಿವರ ನೀಡಿ, ‘ಈ ಹಿಂದೆ ನಡೆದ ಕುಂಭ ಮೇಳಕ್ಕೆ ₹ 4 ಕೋಟಿ ಬಿಡುಗಡೆ ಆಗಿತ್ತು. ಅದರಲ್ಲಿ ₹ 2.50 ಕೋಟಿ ಉಳಿದಿದೆ. ಈ ಬಾರಿಯ ಕುಂಭ ಮೇಳ ಸಂಬಂಧಿಸಿ ಇದುವರೆಗೆ ₹ 3 ಕೋಟಿಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಮೊತ್ತ ಇನ್ನೂ ಹೆಚ್ಚಾಗಬಹುದು’ ಎಂದರು.

ಕುಂಭ ಮೇಳ ಎಲ್ಲಿ ಏನು?

ಸ್ಥಳ: ತಿರುಮಕೂಡಲು ತ್ರಿವೇಣಿ ಸಂಗಮ. ತಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ

ಸ್ಥಳ ವಿಶೇಷ: ಕಾವೇರಿ, ಕಪಿಲಾ ಮತ್ತು ಸ್ಪಟಿಕ ಸರೋವರ (ಗುಪ್ತಗಾಮಿನಿ) ಸಂಗಮ ಸ್ಥಳ. ಅಗಸ್ತ್ಯೇಶ್ವರ, ಹನುಮಂತೇಶ್ವರ ಕ್ಷೇತ್ರ

ದಿನಾಂಕ: ಫೆ. 17, 18 ಮತ್ತು 19

(ಪ್ರತಿದಿನ ಧಾರ್ಮಿಕ ಕಾರ್ಯಕ್ರಮ. ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ. ಫೆ. 19ರಂದು ಪುಣ್ಯಸ್ನಾನ)

1989ರಿಂದ ಆರಂಭವಾದ ಮೇಳ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು 11ನೇ ಕುಂಭ ಮೇಳ

*‌ನದಿಗಳ ಪಾವಿತ್ರ್ಯತೆ, ರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ದೇಹ– ಮನಸ್ಸು ಶುದ್ಧಿಯಾಗಿಸುವ ಉದ್ದೇಶದಿಂದ ಕುಂಭ ಮೇಳ ನಡೆಯುತ್ತಿದೆ

–ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

*ನಾಡಿನಲ್ಲಿ ಧಾರ್ಮಿಕ ಕಾರ್ಯಗಳು ಚೆನ್ನಾಗಿ ಆಗಬೇಕು. ಉತ್ತಮ ಮಳೆ– ಬೆಳೆ ಆಗಬೇಕು. ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಈ ಮೇಳ ನಡೆಯುತ್ತಿದೆ

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.