ADVERTISEMENT

ಕರ್ನೂಲ್ ಬಸ್ ಅವಘಢ: ಉದ್ಯೋಗ ಅರಸಿ ಬಂದಿದ್ದವರು ಬೆಂದು ಹೋದರು...

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:40 IST
Last Updated 24 ಅಕ್ಟೋಬರ್ 2025, 15:40 IST
ಅಗ್ನಿ ಅನಾಹುತದಲ್ಲಿ ಸಜೀವ ದಹನವಾದ ಗೊಳ್ಳ ರಮೇಶ್‌ ಕುಟುಂಬ  
ಅಗ್ನಿ ಅನಾಹುತದಲ್ಲಿ ಸಜೀವ ದಹನವಾದ ಗೊಳ್ಳ ರಮೇಶ್‌ ಕುಟುಂಬ     

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್‌ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ದುರಂತದಲ್ಲಿ ಕಾವೇರಿ ಟ್ರ್ಯಾವೆಲ್ಸ್‌ಗೆ ಸೇರಿದ ವೋಲ್ವೊ ಬಸ್ ಸುಟ್ಟು ಕರಕಲಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದು ನೆಲಸಿದ್ದ ಎಂಟು ಮಂದಿ ಸಜೀವ ದಹನವಾಗಿದ್ದಾರೆ. 

ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಹಾಗೂ ನಾಲ್ವರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮೃತಪಟ್ಟಿದ್ದಾರೆ.

ಟೆಕಿಯೊಬ್ಬರು ಬಸ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಎಲ್ಲರೂ ಆಂಧ್ರಪ್ರದೇಶದವರಾಗಿದ್ದು, ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ನೆಲಸಿದ್ದರು ಎಂದು ತಿಳಿದುಬಂದಿದೆ. 

ADVERTISEMENT

ಬೆಂಗಳೂರಿಗೆ ಬಸ್‌ನಲ್ಲಿ ಬರುತ್ತಿದ್ದವರೆಲ್ಲರೂ ದೀಪಾವಳಿ ಹಬ್ಬಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ಸಂತೋಷದಿಂದಲೇ ಗುರುವಾರ ರಾತ್ರಿ ಬಸ್‌ ಹತ್ತಿದ್ದರು. ಕುಟುಂಬಸ್ಥರೂ ನಗುಮೊಗದಿಂದಲೇ ಅವರನ್ನು ಬೀಳ್ಕೊಟ್ಟಿದ್ದರು. ಆದರೆ, ಮಾರ್ಗಮಧ್ಯೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾರೆ.

ಮೃತಪಟ್ಟ ಟೆಕಿ ಅನುಷಾ

‘ನಗರದಲ್ಲೇ ಉದ್ಯೋಗ ಮಾಡಿಕೊಂಡು ನೆಲಸಿದ್ದ ಎಂಟು ಮಂದಿ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ತಂಡವು ಕರ್ನೂಲ್‌ಗೆ ತೆರಳಿದೆ. ನಗರದಲ್ಲಿ ನೆಲಸಿದ್ದವರು ಇನ್ನೂ ಯಾರಾದರೂ ತೊಂದರೆಗೆ ಸಿಲುಕಿದ್ದಾರೆಯೇ ಎಂಬುದರ ಕುರಿತು ತಂಡವು ಪರಿಶೀಲನೆ ನಡೆಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನ ಗೊಳ್ಳ ರಮೇಶ್ (38) ಅವರ ಕುಟುಂಬವು ನಗರದ ಕಮ್ಮನಹಳ್ಳಿಯಲ್ಲಿ ನೆಲಸಿತ್ತು. ಪತ್ನಿ ಅನುಷಾ (35), ಮಕ್ಕಳಾದ ಶಶಾಂಕ್ (12) ಹಾಗೂ ಮಾನ್ವಿತಾ (10) ಜತೆಗೆ ಹಬ್ಬಕ್ಕೆ ಊರಿಗೆ ತೆರಳಿದ್ದರು. ಈ ಕುಟುಂಬವು ದುರಂತಕ್ಕೀಡಾದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪುಟ್ಟ ಮಕ್ಕಳು, ದಂಪತಿ ನಿದ್ರೆಯಲ್ಲಿ ಇದ್ದರು. ಹೊರಕ್ಕೆ ಬರಲು ಸಾಧ್ಯವಾಗದೇ ಇಡೀ ಕುಟುಂಬವೇ ಅಗ್ನಿಯಲ್ಲಿ ಬೆಂದು ಹೋಗಿದೆ.

ಇದೇ ಬಸ್‌ನಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಮೇಘನಾಥ್(24), ಅನುಷಾ ರೆಡ್ಡಿ(26), ಚಂದನಾ ಹಾಗೂ ಜಿ.ಧಾತ್ರಿ ಅವರೂ ದುರಂತ ಅಂತ್ಯ ಕಂಡಿದ್ದಾರೆ.

ದುರಂತದಲ್ಲಿ ಪಾರಾದ ವೇಣುಗೊಂಡ 

ಯಾದಾದ್ರಿಯ ನಿವಾಸಿ ಅನುಷಾ ರೆಡ್ಡಿ ಅವರು ಹೈದರಾಬಾದ್‌ನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಮರಳುತ್ತಿದ್ದರು. ಆದರೆ, ಈ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಅನುಷಾ ಕೂಡ ಅಸುನೀಗಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ಅನುಷಾ ಅವರು ಅವಘಡದಲ್ಲಿ ಬೆಂದು ಹೋಗಿದ್ದಾರೆ. ಟೆಕಿ ವೇಣುಗೊಂಡ ಎಂಬುವವರು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

‘ಕಣ್ಮುಂದೆಯೇ ಬಸ್ ಹೊತ್ತಿ ಉರಿಯುತ್ತಿದ್ದರೂ ಇತರೆ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಎಲ್‌–13 ಸಂಖ್ಯೆಯ ಸೀಟ್‌ನಲ್ಲಿದ್ದೆ. ತುರ್ತುನಿರ್ಗಮನ ದ್ವಾರ ತೆರೆದುಕೊಳ್ಳಲಿಲ್ಲ. ಬಳಿಕ, ಅದರ ಗಾಜು ಒಡೆದು 15 ಮಂದಿ ಹೊರಕ್ಕೆ ಬಂದೆವು. ಉಳಿದವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ’ ಎಂದು ವೇಣುಗೊಂಡ ತಿಳಿಸಿದ್ದಾರೆ.

‘ಅಗ್ನಿ ಅನಾಹುತಕ್ಕೀಡಾದ ಬಸ್, ದೇಶದಾದ್ಯಂತ ಸಂಚರಿಸುವ ಪರವಾನಗಿ ಹೊಂದಿತ್ತು. ಬೆಂಗಳೂರು ಸೇರಿ ಹೊರರಾಜ್ಯದ ಬೇರೆ ನಗರಕ್ಕೂ ಈ ಬಸ್‌ ತೆರಳುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ದೀಪಾವಳಿ ಹಬ್ಬದ ಕಾರಣಕ್ಕೆ ಈ ಬಸ್‌ ಬೆಂಗಳೂರಿಗೆ ಬರುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.