ADVERTISEMENT

ಕುರಿಗಾಹಿಗಳ ಮೇಲೆ ದೌರ್ಜನ್ಯ: ‘ವಿಧಾನಸೌಧ ಚಲೊ’ ಹೆಸರಿನಲ್ಲಿ ಪ್ರತಿಭಟನೆ

ಕುರಿಗಾಹಿ ರಕ್ಷಣೆಗಾಗಿ ಕಾಯ್ದೆ ರೂಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:45 IST
Last Updated 22 ಮಾರ್ಚ್ 2022, 19:45 IST
‘ಕುರುಬ ಸಮಾಜ ಸಂಘಟನೆಗಳ ಒಕ್ಕೂಟ’ ನೇತೃತ್ವದಲ್ಲಿ ಕುರಿಗಾಹಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
‘ಕುರುಬ ಸಮಾಜ ಸಂಘಟನೆಗಳ ಒಕ್ಕೂಟ’ ನೇತೃತ್ವದಲ್ಲಿ ಕುರಿಗಾಹಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ರಾಜ್ಯದ ಕುರಿಗಾಹಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಸೂಕ್ತ ಭದ್ರತೆ ಕಲ್ಪಿಸಬೇಕು’ ಎಂದು ಒತ್ತಾಯಿಸಿ ‘ಕುರುಬ ಸಮಾಜ ಸಂಘಟನೆಗಳ ಒಕ್ಕೂಟ’ದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

‘ವಿಧಾನಸೌಧ ಚಲೊ’ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ಕುರಿಗಾಹಿಗಳು ಪಾಲ್ಗೊಂಡಿದ್ದರು. ಮೆಜೆಸ್ಟಿಕ್ ವೃತ್ತದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕೆಲ ಮುಖಂಡರು, ವಿಧಾನಸೌಧದತ್ತ ತೆರಳಲು ಯತ್ನಿಸಿದರು. ಸ್ವಾತಂತ್ರ್ಯ ಉದ್ಯಾನ ಬಳಿ ಅವರನ್ನು ಪೊಲೀಸರು ತಡೆದರು. ಬಳಿಕ, ಉದ್ಯಾನದಲ್ಲಿ ಬಹಿರಂಗ ಸಭೆ ನಡೆಯಿತು.

‘ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ನೈಜ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಬಸವಕಲ್ಯಾಣ ತಾಲ್ಲೂಕಿನ ಜಾನಾಪುರದಲ್ಲೂ ಕುರಿಗಾಹಿ ಕೊಲೆ ಆಗಿದ್ದು, ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿಲ್ಲ’ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಸಿದ್ದಣ್ಣ ತೇಜಿದೂರಿದರು.

ADVERTISEMENT

‘ರಾಜ್ಯದಲ್ಲಿ ಹೆಚ್ಚಿರುವ ಕುರಿಗಾಹಿಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕುರಿಗಾಹಿ ರಕ್ಷಣೆಗಾಗಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಬೇಕು’ ಎಂದೂ ಒತ್ತಾಯಿಸಿದರು.

ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್ ಶಾಖಾ ಮಠದ ಸಿದ್ಧರಾಮಾನಂದ ಪುರಿ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪ್ರತಿಭಟನೆಯಲ್ಲಿದ್ದರು.

ಪ್ರಮುಖ ಬೇಡಿಕೆಗಳು

* ಕುರಿಗಾಹಿಗಳ ಆತ್ಮ ರಕ್ಷಣೆಗೆ ಉಚಿತವಾಗಿ ಪರವಾನಗಿ ಸಮೇತ ಬಂದೂಕು ನೀಡಬೇಕು

* ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಕುರಿಗಾಹಿಗಳ ಸಭೆ ನಡೆಸಬೇಕು. ಕುರಿಗಾಹಿಗಳ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಇತ್ಯರ್ಥಪಡಿಸಬೇಕು

* ಕುರಿಗಾಹಿಗಳ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡಬೇಕು

* ಅವಘಡಗಳು ಸಂಭವಿಸಿದಾಗ ಕುರಿಗಾಹಿಗಳ ಹಿತರಕ್ಷಣೆಗಾಗಿ ಶಾಶ್ವತ ಪರಿಹಾರ ನೀಡಿ ಸ್ಥಾಪಿಸಬೇಕು

* ಅನುಗ್ರಹ ಯೋಜನೆ ಪರಿಹಾರ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಬೇಕು

* ಕುರಿಗಳ ಆರೋಗ್ಯ ದೃಷ್ಟಿಯಿಂದ ಕಾಲ ಕಾಲಕ್ಕೆ ಲಸಿಕೆಗಳನ್ನು ಉಚಿತವಾಗಿ ಪೂರೈಸಬೇಕು

* ಪ್ರತಿ ತಾಲ್ಲೂಕಿಗೊಂದು ರೋಗ ತಪಾಸಣಾ ಕೇಂದ್ರ ತೆರೆಯಬೇಕು

* ಕುರಿಗಳ ತುರ್ತು ಆರೋಗ್ಯ ಚಿಕಿತ್ಸೆಗಾಗಿ ಪ್ರತಿ ಹೋಬಳಿಗೊಂದು ಆಂಬುಲೆನ್ಸ್ ಮೀಸಲಿಡಬೇಕು

* ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು

ಸಿಐಡಿ ತನಿಖೆಗೆ ಎಂ.ಟಿ.ಬಿ ಆಗ್ರಹ
‘ಕುಂದಗೋಳ ತಾಲ್ಲೂಕಿನಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು’ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಅವರು, ‘ಕುರಿಗಾಹಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕುರಿಗಾಹಿಗಳ ಟೆಂಟ್‌ಗಳಿಗೆ ಪೊಲೀಸ್ ಭದ್ರತೆ ಒದಗಿಸಬೇಕು. ಕುರಿಗಾಹಿಗಳು ಅರ್ಜಿ ಸಲ್ಲಿಸಿದ 15 ದಿನದೊಳಗೆ ಬಂದೂಕು ಪರವಾನಗಿ ನೀಡಬೇಕು’ ಎಂದರು.

‘ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎನ್ನುವ ಬೇಡಿಕೆ ಕೇಂದ್ರ, ರಾಜ್ಯ ಸರ್ಕಾರಗಳ ಮುಂದಿದೆ’ ಎಂದೂ ನಾಗರಾಜು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.