ADVERTISEMENT

ಮಸೂದೆ ಅಂಗೀಕಾರಕ್ಕೆ ಏಕೆ ತರಾತುರಿ?

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:13 IST
Last Updated 15 ಫೆಬ್ರುವರಿ 2019, 19:13 IST
ಸ.ರಘುನಾಥ (ಕುಳಿತವರು–ಎಡದಿಂದ) ಜಿ.ಮಮತಾ ಸಾಗರ, ಶಾ.ಮಂ.ಕೃಷ್ಣರಾಯ, ಕಾಶೀನಾಥ್ ಅಂಬಲಗೆ, ಜಿ.ವಿ.ರೇಣುಕಾ, ಲಕ್ಷ್ಮಿ ಚಂದ್ರಶೇಖರ್‌ ಅವರನ್ನು ಎಚ್.ಎನ್.ನಾಗಮೋಹನದಾಸ್ ಸನ್ಮಾನಿಸಿದರು. ಕೆ.ಮರುಳಸಿದ್ದಪ್ಪ, ಪ್ರಾಧಿಕಾರದ ರಿಜಿಸ್ಟ್ರಾರ್ ಕು.ಈಶ್ವರ್ ಮಿರ್ಜಿ ಇದ್ದರು    –ಪ್ರಜಾವಾಣಿ ಚಿತ್ರ
ಸ.ರಘುನಾಥ (ಕುಳಿತವರು–ಎಡದಿಂದ) ಜಿ.ಮಮತಾ ಸಾಗರ, ಶಾ.ಮಂ.ಕೃಷ್ಣರಾಯ, ಕಾಶೀನಾಥ್ ಅಂಬಲಗೆ, ಜಿ.ವಿ.ರೇಣುಕಾ, ಲಕ್ಷ್ಮಿ ಚಂದ್ರಶೇಖರ್‌ ಅವರನ್ನು ಎಚ್.ಎನ್.ನಾಗಮೋಹನದಾಸ್ ಸನ್ಮಾನಿಸಿದರು. ಕೆ.ಮರುಳಸಿದ್ದಪ್ಪ, ಪ್ರಾಧಿಕಾರದ ರಿಜಿಸ್ಟ್ರಾರ್ ಕು.ಈಶ್ವರ್ ಮಿರ್ಜಿ ಇದ್ದರು    –ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಕಲಾಪದ ಕೊನೆಯ ದಿನ, ಅವಸರವಸರವಾಗಿ ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಪ್ರವೃತ್ತಿ' ಎಂದುನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ‘2018ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಹಾಗೂ 30 ಪುಸ್ತಕಗಳ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾವಿಂದು ರಾಜಕೀಯ ಪ್ರಭುತ್ವದ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವನ್ನು ಮರೆತಿದ್ದೇವೆ. ಹಣದ ಚೀಲ ಹೆಗಲ ಮೇಲೆ ಹಾಕಿಕೊಂಡು ಬರುವವರನ್ನು ಗೆಲ್ಲಿಸುತ್ತಿದ್ದೇವೆ.ಇಂದಿನ ಶಾಸಕರು, ಸಂಸದರಿಗೆ ಕಲಾಪದಲ್ಲಿ ಚರ್ಚೆ ಮಾಡುವ ಪರಿಯೇ ತಿಳಿದಿಲ್ಲ. ನಿಷ್ಕಳಂಕರಾದವರಿಗೆ ರಾಜಕೀಯದಲ್ಲಿ ಅವಕಾಶ ನೀಡಿದರೆ ಮಾತ್ರ ಸಂಸದೀಯ ಪ್ರಜಾಪ್ರಭುತ್ವ
ಉಳಿಯಲಿದೆ' ಎಂದರು.

ADVERTISEMENT

ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, 'ಪ್ರಾಧಿಕಾರದಿಂದ ಪ್ರಕಟಿಸಿದ ಪುಸ್ತಕಗಳನ್ನು ಸಮಾಜ ಕಲ್ಯಾಣ ಇಲಾಖೆ ಖರೀದಿಸಿ, ವಿದ್ಯಾರ್ಥಿ ನಿಲಯಗಳಲ್ಲಿ ಓದಿಗಾಗಿ ಇಡಲು ಮುಂದೆ ಬಂದಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳು ಸಂಪುಟಗಳನ್ನು ರಾಜ್ಯದ ಎಲ್ಲ ಶಾಸಕರು ಮತ್ತು ಸಂಸದರಿಗೆ ಉಚಿತವಾಗಿ ತಲುಪಿಸುತ್ತೇವೆ' ಎಂದು ಹೇಳಿದರು.

'ಕನ್ನಡದಿಂದ ಭಾರತೀಯ ಭಾಷೆಗಳಿಗೆ ಪ್ರಾಧಿಕಾರವು ಅನುವಾದ ಮಾಡಿಸಿದ ಪುಸ್ತಕಗಳನ್ನು ಕೊಳ್ಳುವವರೇ ಇಲ್ಲ. ಅವು ಗೋದಾಮುಗಳಲ್ಲಿ ದೂಳು ಹಿಡಿಯುತ್ತಿವೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಲೇಖಕರಾದ ಶಾ.ಮಂ.ಕೃಷ್ಣರಾಯ, ಕಾಶೀನಾಥ ಅಂಬಲಗೆ ಅವರಿಗೆ 2018ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರವ ಪ್ರಶಸ್ತಿ ಪುರಸ್ಕೃತರಾದ ಎಲ್‌.ಎಸ್‌.ಶೇಷಗಿರಿರಾವ್‌, ಜಿ.ಎಸ್‌.ಆಮೂರ, ವೀಣಾ ಶಾಂತೇಶ್ವರ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಲೇಖಕರಾದ ಸ.ರಘುನಾಥ, ಲಕ್ಷ್ಮಿ ಚಂದ್ರಶೇಖರ್, ಜಿ.ವಿ.ರೇಣುಕಾ, ಜಿ.ಮಮತಾ ಸಾಗರ್, ಪಿ.ಶ್ರೀಕಾಂತ್ ಅವರಿಗೆ 2017ನೇ ಸಾಲಿನ ಪುಸ್ತಕ ಬಹುಮಾನ(ಅನುವಾದ) ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.