ADVERTISEMENT

ಕುವೆಂಪು ವಿಶ್ವವಿದ್ಯಾಲಯ: ಒಳಗೆ ವಿಚಾರ ಸಂಕಿರಣ; ಹೊರಗೆ ಕಪ್ಪುಪಟ್ಟಿ ಚಳವಳಿ

ಕುಲಪತಿ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 5:45 IST
Last Updated 19 ನವೆಂಬರ್ 2025, 5:45 IST
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಎದುರು ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ನಡೆದ ಪ್ರತಿಭಟನೆಯ ನೋಟ
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಎದುರು ಮಂಗಳವಾರ ದಲಿತ ಸಂಘರ್ಷ ಸಮಿತಿಯಿಂದ ನಡೆದ ಪ್ರತಿಭಟನೆಯ ನೋಟ   

ಶಂಕರಘಟ್ಟ: ‘ವಿಶ್ವಮಾನವತ್ವದ ಸಂದೇಶ ಸಾರಿದ ಕುವೆಂಪು ಅವರ ಹೆಸರಿನ ವಿಶ್ವವಿದ್ಯಾಲಯದಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಪೋಷಿಸುವ ಭಗವದ್ಗೀತೆ ವಿಷಯ ಕುರಿತ ವಿಚಾರ ಸಂಕಿರಣದ ಔಚಿತ್ಯವೇನು?’ ಎಂದು ಪ್ರಶ್ನಿಸಿ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಶಂಕರಘಟ್ಟದಲ್ಲಿರುವ ವಿಶ್ವವಿದ್ಯಾಲಯದ ದ್ವಾರಬಾಗಿಲಿನ ಎದುರು ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್‌ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಕುರಿತ ವಿಚಾರ ಸಂಕಿರಣವನ್ನು ವಿರೋಧಿಸಿ ಪ್ರತಿಭಟನಾಕಾರರು ಕಪ್ಪು ಪಟ್ಟಿ ಪ್ರದರ್ಶಿಸಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.

‘ವಿಶ್ವಮಾನವ ಸಂದೇಶವನ್ನು ಬೋಧಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯದಲ್ಲಿ ಇಂತಹ ವಿಚಾರ ಸಂಕಿರಣ ಆಯೋಜಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಯುವಪೀಳಿಗೆ ವರ್ಣಾಶ್ರಮ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ದೂರಿದ ಅವರು, ‘ಸ್ಕ್ರೀನಿಂಗ್ ಸಮಿತಿ ಮುಂದೆ ಬಾರದೇ ಈ ಕಾರ್ಯಕ್ರಮ ಹೇಗೆ ನಿಗದಿಯಾಗಿದೆ?, ಯಾವ ವಿಭಾಗದಿಂದ ಈ ಕಾರ್ಯಕ್ರಮ ನಡೆಯುತ್ತಿದೆ?’ ಎಂದು ಪ್ರಶ್ನಿಸಿದರು.

‘ಕಾರ್ಯಕ್ರಮದ ಅಧ್ಯಕ್ಷತೆ ವಿಶ್ವವಿದ್ಯಾಲಯದ ಕುಲಪತಿ ಶರತ್‌ ಅನಂತಮೂರ್ತಿ ಅವರೇ ವಹಿಸಿಕೊಂಡದ್ದನ್ನು ಗಮನಿಸಿದರೆ ಇದು ಕುವೆಂಪು ಅವರ ಆದರ್ಶಗಳಿಗೆ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನಂತಮೂರ್ತಿ ಅವರ ಹೆಸರನ್ನು ತೆಗೆದುಹಾಕಿ. ಅವರ ವ್ಯಕ್ತಿತ್ವಕ್ಕೂ ನಿಮಗೂ ಹೊಂದುವುದಿಲ್ಲ. ನೀವು ಶರತ್ ಎಂಬ ಹೆಸರನ್ನು ಮಾತ್ರ ಇಟ್ಟುಕೊಳ್ಳಿ. ಭಗವದ್ಗೀತೆಯ ಬಗ್ಗೆ ಒಳ್ಳೆಯ ಅಂಶಗಳು ಇದ್ದರೆ ಕುಲಪತಿಯವರೇ ಈ ಕುರಿತು ಇಲ್ಲಿಗೆ ಬಂದು ಸ್ಪಷ್ಟಪಡಿಸಲಿ’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರು ಪೊಲೀಸರ ಭದ್ರತೆಯೊಂದಿಗೆ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಚರ್ಚಿಸಿದರು. ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಶಿವಬಸಪ್ಪ, ಚಿಕ್ಕಮರಡಿ ರಮೇಶ್, ಹರಿಗೆ ರವಿ, ಜಗದೀಶ ಚಕ್ರಿ, ನಾಗರಾಜ ಸಾಗರ, ನಾಗರಾಜ ಕಾಚಗೊಂಡನಹಳ್ಳಿ, ರಾಜಶೇಖರ್, ಶಿವಣ್ಣ, ಚೇತನ್‌ಕುಮಾರ್, ಅಖಿಲಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಚಾರ ಸಂಕಿರಣ ವಿರೋಧಿಸಿ ನಡೆದ ಹೋರಾಟವನ್ನು ಸ್ವಾಗತಿಸುತ್ತೇನೆ. ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಯಾವುದೋ ಲೇಬಲ್ ಕಟ್ಟಿ ಹಾಳು ಮಾಡುವುದು ಬೇಡ
-ಪ್ರೊ.ಶರತ್ ಅನಂತಮೂರ್ತಿ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.