ADVERTISEMENT

ಬಿಜೆಪಿ ಮಾಡಿರುವ ದ್ರೋಹದ ವಿರುದ್ಧ ಕಾರ್ಮಿಕರ ದಂಗೆ: ಸುರ್ಜೇವಾಲಾ ಆರೋಪ

ಎಐಸಿಸಿ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 14:10 IST
Last Updated 9 ಜುಲೈ 2025, 14:10 IST
ರಣದೀಪ್‌ಸಿಂಗ್ ಸುರ್ಜೇವಾಲಾ
ರಣದೀಪ್‌ಸಿಂಗ್ ಸುರ್ಜೇವಾಲಾ   

ಬೆಂಗಳೂರು: ‘ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೇವಾಲಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಕಾರ್ಮಿಕರಿಗೆ ಮಾಡಿರುವ ದ್ರೋಹವು ದೇಶದಾದ್ಯಂತ ಕಾರ್ಮಿಕ ದಂಗೆಯನ್ನು ಹುಟ್ಟುಹಾಕಿದೆ’ ಎಂದರು.

‘ಸಶಸ್ತ್ರ ಪಡೆಗಳಲ್ಲಿ ಸುಮಾರು 1.55 ಲಕ್ಷ, ರೈಲ್ವೆ‌ಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಿಆರ್‌ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 85 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಾರ್ವಜನಿಕ ಸೇವಾ ಸಿಬ್ಬಂದಿಯ ತುರ್ತು ಅಗತ್ಯದ ಹೊರತಾಗಿಯೂ, ಕೇಂದ್ರ ಸರ್ಕಾರ ಈ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಮೀನಮೇಷ ಎಣಿಸುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಿರುದ್ಯೋಗವು ಆತಂಕಕಾರಿ ಮಟ್ಟ ತಲುಪಿದೆ. ದೇಶದಲ್ಲಿ ನಿರುದ್ಯೋಗ ಬೆಳವಣಿಗೆ ದರ ಶೇ 7.5 ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ತಿಳಿಸಿದೆ. ಇದು 45 ವರ್ಷಗಳಲ್ಲಿಯೇ ದಾಖಲಾದ ಅತಿ ಹೆಚ್ಚು ನಿರುದ್ಯೋಗ ದರ. ಈ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ’ ಎಂದರು.

‘ನರೇಗಾ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಸರಿಯಾಗಿ ನಿರ್ವಹಿಸದ ಕಾರಣ ಸುಮಾರು 7 ಕೋಟಿ ಜನರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈ ಯೋಜನೆಯು ಬಡವರಿಗೆ ಸಹಾಯ ಮಾಡುವ ಬದಲು ಅವರನ್ನು ಕೆಲಸದಿಂದ ಹೊರಗಿಡುವ ಸಾಧನವಾಗಿ ಬಳಕೆಯಾಗುತ್ತಿದೆ’ ಎಂದೂ ಆರೋಪಿಸಿದರು.

ಆಧಾರ್- ನರೇಗಾ ಜಾಬ್ ಕಾರ್ಡ್ ಲಿಂಕ್ ಮಾಡುವುದರಿಂದ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಇಲ್ಲದಾಗಿದೆ.
– ರಣದೀಪ್‌ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.