ADVERTISEMENT

ಅಗರಬತ್ತಿ ಉದ್ಯಮದ ಹಿತ ಕಾಪಾಡಿ: ಲಹರ್ ಸಿಂಗ್‌ ಒತ್ತಾಯ

lahar singh

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 15:41 IST
Last Updated 9 ಆಗಸ್ಟ್ 2023, 15:41 IST
   

ನವದೆಹಲಿ: ಅಗರಬತ್ತಿ ಉದ್ಯಮದ ಸಮಸ್ಯೆಗಳ ಕುರಿತು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರು ರಾಜ್ಯಸಭೆಯಲ್ಲಿ ಬುಧವಾರ ಗಮನ ಸೆಳೆದರು. ಈ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

‘ಅಗರಬತ್ತಿ ಉದ್ಯಮದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ₹10,000 ಕೋಟಿ ವಹಿವಾಟಿನ ಮಾರುಕಟ್ಟೆ ಹೊಂದಿದೆ. ಹಾಗೆಯೇ ಕರ್ನಾಟಕವು ಜಗತ್ತಿನ ಅಗರಬತ್ತಿ ರಾಜಧಾನಿಯಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ 4 ಲಕ್ಷಕ್ಕೂ ಹೆಚ್ಚು ಜನರು ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದು, ಅದರಲ್ಲಿ ಶೇ 80 ಮಹಿಳೆಯರೇ ಆಗಿದ್ದಾರೆ ಎಂದು ಲಹರ್‌ ಸಿಂಗ್‌ ತಿಳಿಸಿದರು.

ಅಗರಬತ್ತಿ ತಯಾರಕರು ಕಚ್ಛಾ ವಸ್ತುಗಳ ಲಭ್ಯತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಿದಿರನ್ನು ಖರೀದಿಸಿ ತರಿಸುವುದು ಸವಾಲಾಗಿದೆ. ಈ ಉದ್ಯಮಕ್ಕೆ ವಾಣಿಜ್ಯ, ಹಣಕಾಸು, ಅರಣ್ಯ ಮತ್ತು ಇತರ ಸಚಿವಾಲಯಗಳ ಸಹಾಯದ ಅಗತ್ಯವಿದೆ. ಸರ್ಕಾರವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ನಿವಾರಿಸದಿದ್ದರೆ, ಭಾರತೀಯ ಅಗರಬತ್ತಿ ಉದ್ಯಮವು ಆಗ್ನೇಯ ಏಷ್ಯಾ ಮತ್ತು ಕೆಲವು ಆಫ್ರಿಕನ್ ದೇಶಗಳ ಮುಂದೆ ತನ್ನ ಮಾರುಕಟ್ಟೆ ಕಳೆದುಕೊಳ್ಳುವ ಆತಂಕವಿದೆ ಎಂದು ಅವರು ತಿಳಿಸಿದರು.

ADVERTISEMENT

ಅಗರಬತ್ತಿ ಉದ್ಯಮವು ವಿಶೇಷವಾಗಿ ಹಿಂದುಳಿದ ಮತ್ತು ತಳಮಟ್ಟದ ವರ್ಗದವರಿಗೆ ಆರ್ಥಿಕತೆಯ ದೊಡ್ಡ ಮೂಲವಾಗಿದೆ. ಉದ್ಯೋಗದ ಮೂಲಕ ಲಕ್ಷಾಂತರ ಮಹಿಳೆಯರನ್ನು ಆರ್ಥಿಕವಾಗಿ ಬಲಗೊಳಿಸುವುದರೊಂದಿಗೆ, ಜೀವನೋಪಾಯಕ್ಕೆ ನೆರವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.