ಬೆಂಗಳೂರು: ‘ಕೆರೆಗಳ ಬಫರ್ ಝೋನ್ ಕಡಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗುತ್ತದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್ ಹೇಳಿದರು.
ನಿವೃತ್ತ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.
‘ಕೆರೆಗಳ ಬಫರ್ ಝೋನ್ ಅನ್ನು ವೈಜ್ಞಾನಿಕವಾಗಿ ಸೂಕ್ತ ಅಧ್ಯಯನಗಳ ಮೂಲಕ ನಿಗದಿಪಡಿಸಬೇಕು. ಆದ್ದರಿಂದ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಅವರು ತಿಳಿಸಿದರು.
‘ಎಲ್ಲ ಕೆರೆಗಳಿಗೆ 30 ಮೀಟರ್ ಬಫರ್ ಝೋನ್ ಅನ್ನು ನಿಗದಿಪಡಿಸಲಾಗಿದೆ. ಅದನ್ನು ಕಡಿತಗೊಳಿಸಿ ಒಂದೊಂದು ಕೆರೆಗೆ ಒಂದೊಂದು ರೀತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗದಿಪಡಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವುದು ಸ್ವಾಗತಾರ್ಹ’ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಜಿ ವಿಶೇಷ ನಿರ್ದೇಶಕ ವಿ.ಎಸ್. ಪ್ರಕಾಶ್ ಹೇಳಿದರು.
‘ರಾಜ್ಯದಲ್ಲಿರುವ ಕೆರೆಗಳ ಬಫರ್ ಝೋನ್‌ನ ಅಟ್ಲಾಸ್ ಪ್ರಕಟಿಸಬೇಕು. ಜಿಐಎಸ್ ಆಧರಿತ ‘ಜಲಮೂಲಗಳ ಬಫರ್ ಅಟ್ಲಾಸ್ ಕರ್ನಾಟಕ’ವನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಕೆರೆ, ನಾಲಾಗಳ ಬಗ್ಗೆ ವೈಜ್ಞಾನಿಕ ವರದಿಯನ್ನೂ ಪ್ರಕಟಿಸಬೇಕು. ಬಫರ್ ಝೋನ್ ಬಗ್ಗೆ ವೈಜ್ಞಾನಿಕ ಅಧ್ಯಯನ, ತಜ್ಞರ ಜೊತೆ ಸಮಾಲೋಚನೆ ನಡೆಸಬೇಕು ಎಂಬುದು ಅಧಿಕಾರಿಗಳ ಸಭೆಯಲ್ಲಿನ ಅಭಿಪ್ರಾಯವಾಗಿದೆ. ಈ ಸಲಹೆಗಳನ್ನು ರಾಜ್ಯಪಾಲ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಣ್ಣ ನೀರಾವರಿ ಸಚಿವರಿಗೆ ಮನವಿ ರೂಪದಲ್ಲಿ ನೀಡಲಾಗುತ್ತದೆ’ ಎಂದು ತಿಳಿಸಿದರು.
ಅರಣ್ಯ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಎಚ್. ಸ್ವಾಮಿನಾಥ್, ಬೆಂಗಳೂರು ಜಲಮಂಡಳಿ ಮಾಜಿ ಮುಖ್ಯ ಎಂಜಿನಿಯರ್ ಎಂ.ಎನ್. ತಿಪ್ಪೇಸ್ವಾಮಿ, ಜಲ ಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಎಸ್. ರಾಜಾರಾವ್, ಕಾಡಾ ನಿರ್ದೇಶನಾಲಯದ ಮಾಜಿ ನಿರ್ದೇಶಕ ಶಿವಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.