
ಗದಗ: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಒಂಬತ್ತನೇ ದಿನವೂ ಉತ್ಖನನ ಮುಂದುವರೆದಿದ್ದು, ದಿನದ ಅಂತ್ಯಕ್ಕೆ ಮೂಳೆ ಚೂರುಗಳಷ್ಟೇ ಪತ್ತೆಯಾದವು.
‘ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಷಣ್ಮುಖಪ್ಪ ರವದಿ ಅವರ ಜಮೀನಿನಲ್ಲಿ ಏಳು ಹೆಡೆಯ ಹಾವಿನ ಶಿಲ್ಪ ಪತ್ತೆಯಾಗಿದೆ. ಅದರ ಅಕ್ಕಪಕ್ಕ ಎರಡು ಹೆಡೆಯುಳ್ಳ ಏಳು ಹಾವಿನ ಶಿಲೆಗಳು ಸಿಕ್ಕಿವೆ. ಏಳು ಹೆಡೆಯ ಸರ್ಪದ ಕೆತ್ತನೆ ಇರುವ ಶಿಲ್ಪ ವಿಜಯನಗರ ಅರಸರ ಕಾಲದ್ದು ಇರಬಹುದೆಂದು ತಜ್ಞರು ಅಂದಾಜಿಸಿದ್ದಾರೆ’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಗ್ರಾಮದ ಕಲ್ಲಯ್ಯ ಬಳಗಾನೂರ ಹಾಗೂ ಷಣ್ಮುಖಪ್ಪ ರವದಿ ಅವರ ಜಮೀನಿನ ಬಾವಿ, ತೋಟದ ಮನೆಯ ಗೋಡೆಗಳಲ್ಲಿ ಕೂಡ ಇತಿಹಾಸದ ಕುರುಹುಗಳು ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆಯೇ ನಿರ್ಮಾಣವಾದ ಬಾವಿ, ಮನೆಯಲ್ಲಿ ಐತಿಹಾಸಿಕ ಕಲ್ಲು, ಶಿಲೆಗಳನ್ನು ಬಳಸಿಕೊಳ್ಳಲಾಗಿದೆ.
‘ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಕುರುಹುಗಳು ಇದ್ದರೂ ಅದನ್ನು ಸರ್ಕಾರ ತೆಗೆದುಕೊಂಡು ಹೋಗಲಿ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ’ ಎಂದು ಕಲ್ಲಯ್ಯ ಬಳಗಾನೂರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.