ADVERTISEMENT

ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ: ಎಚ್‌.ಡಿ. ಕುಮಾರಸ್ವಾಮಿಗೆ ಸಂಕಷ್ಟ

ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 19:30 IST
Last Updated 25 ಫೆಬ್ರುವರಿ 2025, 19:30 IST
ಎಚ್‌ಡಿಕೆ
ಎಚ್‌ಡಿಕೆ   

ನವದೆಹಲಿ: ಕೇಂದ್ರದ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಮತ್ತೆ ವಿಚಾರಣೆ ಎದುರಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಅಕ್ರಮ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡುವಂತೆ ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಮನವಿಯನ್ನು 2020ರಲ್ಲಿ ಹೈಕೋರ್ಟ್‌ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು.

ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲು ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದು ದೂರಿ ಹಿರಿಯ ವಕೀಲ ಮುಕುಲ್ ರೊಹಟಗಿ ಹಾಗೂ ವಕೀಲ ಬಾಲಾಜಿ ಶ್ರೀನಿವಾಸನ್‌ ನೇತೃತ್ವದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ನಿರಾಕರಿಸಿತು.

ADVERTISEMENT

ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ಸೆಕ್ಷನ್ 19(1)(ಬಿ)ರ ತಿದ್ದುಪಡಿ ಅನುಸಾರ, ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮದ ಆಧಾರದಲ್ಲಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ‘ಸೆಕ್ಷನ್ 19ರ ಅಡಿಯಲ್ಲಿ ಪೂರ್ವಾನುಮತಿ ಪಡೆಯದೆ ಪ್ರಕರಣ ದಾಖಲಿಸಲಾಗಿದೆ. ಇದನ್ನು ಪ್ರಶ್ನಿಸಿ ಸೆಕ್ಷನ್ 482 ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಹೈಕೋರ್ಟ್ ಲೋಪ ಎಸಗಿದೆ’ ಎಂದು ಕುಮಾರಸ್ವಾಮಿ ಪರ ವಕೀಲರು ವಾದ ಮಂಡಿಸಿದರು. 

ಕರ್ನಾಟಕ ಸರ್ಕಾರ ಪರವಾಗಿ ವಾದಿಸಿದ ಹಿರಿಯ ವಕೀಲ ಹರೀನ್‌ ಪಿ. ರಾವಲ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮನ್ ಪವಾರ್, ‘ಅರ್ಜಿದಾರರು ಸಂವಿಧಾನದ 136ನೇ ಪರಿಚ್ಛೇದದ ಅಡಿಯಲ್ಲಿ ವಿವೇಚನೆಯ ವ್ಯಾಪ್ತಿಯನ್ನು ಪ್ರಶ್ನಿಸಲು ಅಗತ್ಯವಿರುವ ಸಂಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ’ ಎಂದು ವಾದಿಸಿದರು.

‘ಅರ್ಜಿದಾರರು ಪ್ರಕರಣ ದಾಖಲಿಸುವ ಸಮಯದಲ್ಲಿ ಮುಖ್ಯಮಂತ್ರಿಯ ಹುದ್ದೆಯಲ್ಲಿಲ್ಲದ ಕಾರಣ, ಪೂರ್ವಾನುಮತಿಯ ರಕ್ಷಣೆ ಅವರಿಗೆ ದೊರೆಯುವುದಿಲ್ಲ. 2018ರ ತಿದ್ದುಪಡಿಯನ್ನು, ಅದರ ಜಾರಿಗೂ ಮೊದಲು ನಡೆದ ಘಟನೆಗಳಿಗೆ ಅನ್ವಯಿಸಲು ಸಾಧ್ಯವಿಲ್ಲ’ ಎಂದು ಅವರು ವಾದ ಮಂಡಿಸಿದರು. ಇವುಗಳನ್ನು ಪರಿಗಣಿಸಿದ ನ್ಯಾಯಾಲಯವು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು ಮತ್ತು ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿತು. 

‘ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಾರ್ವಜನಿಕ ಸೇವಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಅದಕ್ಕೂ ಮುಂಚಿನ ಪ್ರಕರಣಕ್ಕೆ ಈ ಕಾಯ್ದೆಯಡಿ ರಕ್ಷಣೆ ಹೇಗೆ ಪಡೆಯುತ್ತೀರಿ’ ಎಂದು ಕುಮಾರಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಪ್ರಶ್ನಿಸಿತ್ತು. ‘2012ರಲ್ಲಿ ನೀವು ಏನಾದರೂ ಮಾಡಿರಬಹುದು. ಕಾಯ್ದೆಗೆ 2018ರಲ್ಲಿ ತಿದ್ದುಪಡಿ ಮಾಡಲಾಯಿತು. ಅಂತಹ ಸಂದರ್ಭದಲ್ಲಿ ವಿಚಾರಣೆಗೆ ಅನುಮೋದನೆ ಅಗತ್ಯವಿದೆ ಎಂದು ನೀವು ಹೇಳಬಹುದೇ’ ಎಂದು ಕೇಳಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 19 ಗಮನಿಸಿ ಹೈಕೋರ್ಟ್‌ ತೀರ್ಪು ನೀಡಿದೆ. ಆ ಪ್ರಕಾರ, ವಿಚಾರಣೆಗೆ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೇಳಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತ್ತು.

ಪ್ರಕರಣವೇನು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿರುವ ಎರಡು ವಿಭಿನ್ನ ಜಮೀನುಗಳನ್ನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಡಿನೋಟಿಫೈ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

ಎಲ್ಲಿ: ಬನಶಂಕರಿ ಐದನೇ ಹಂತದ ಹಲಗೆವಡೇರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 128 ಹಾಗೂ 137

ಎಷ್ಟು ಜಾಗ: 2 ಎಕರೆ 24 ಗುಂಟೆ

ಯಾವಾಗ: 2006ರಿಂದ 2007ರ ನಡುವೆ

ಕುಮಾರಸ್ವಾಮಿ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿವೆ. ಅವರು ಮುಖ್ಯಮಂತ್ರಿ ಹುದ್ದೆಯನ್ನು ನೇರವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ.
–ಕರ್ನಾಟಕ ಸರ್ಕಾರದ ವಕೀಲರು

ಪ್ರಕರಣದ ಹಿನ್ನೆಲೆ

ಪದ್ಮಾ ಎಂಬುವವರಿಗೆ ಸೇರಿದ್ದ ಸರ್ವೆ ಸಂಖ್ಯೆ 128ರಲ್ಲಿರುವ 1 ಎಕರೆ 10 ಗುಂಟೆ ಹಾಗೂ ಸರ್ವೆ ಸಂಖ್ಯೆ 137ರ 1 ಎಕರೆ 14 ಗುಂಟೆ ಜಾಗವನ್ನು ಅಂತಿಮ ಅಧಿಸೂಚನೆ ಮೂಲಕ 1997ರ ಸೆಪ್ಟೆಂಬರ್‌ 12ರಂದು ವಶಪಡಿಸಿಕೊಳ್ಳಲಾಗಿತ್ತು. ಭೂಮಾಲೀಕರಿಗೆ 1998ರಲ್ಲಿ ಪರಿಹಾರ ನೀಡಲಾಗಿತ್ತು. ಈ ಜಾಗವನ್ನು 1999ರ ಸೆಪ್ಟೆಂಬರ್‌ 29ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. 

1991ರ ಕರ್ನಾಟಕ ಭೂ (ವರ್ಗಾವಣೆ ನಿರ್ಬಂಧ) ಕಾಯ್ದೆ ಉಲ್ಲಂಘಿಸಿ ಪದ್ಮಾ ಅವರು ಮೂರನೇ ವ್ಯಕ್ತಿಗೆ ಸೇಲ್‌ಡೀಡ್‌ ಮಾಡಿಕೊಟ್ಟಿದ್ದರು. ಈ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ/ ಡಿನೋಟಿಫೈ ಮಾಡುವಂತೆ ಮುಖ್ಯಮಂತ್ರಿಗೆ ಪದ್ಮಾ ಮನವಿ ಸಲ್ಲಿಸಿದ್ದರು. ಪ್ರಾಧಿಕಾರವು 2005ರ ಡಿಸೆಂಬರ್‌ನಲ್ಲಿ ಪತ್ರ ಬರೆದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಹಾಗೂ ಈ ಜಾಗ ಪ್ರಾಧಿಕಾರಕ್ಕೆ ಸೇರಿದ್ದು ಎಂದು ಬಲವಾಗಿ ಪ್ರತಿಪಾದಿಸಿತ್ತು.

 2 ಎಕರೆ 24 ಗುಂಟೆಯನ್ನು ಡಿನೋಟಿಫೈ ಮಾಡುವಂತೆ ಕುಮಾರಸ್ವಾಮಿ 2007ರ ಸೆಪ್ಟೆಂಬರ್‌ 25ರಂದು ಆದೇಶಿಸಿದ್ದರು ಎಂದು ಆರೋಪಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎಸ್.ಮಹದೇವ ಸ್ವಾಮಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಜನ‍ಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು 2012ರ ಜುಲೈ 4ರಂದು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ 2015ರಲ್ಲಿ ಅರ್ಜಿ ವಜಾಗೊಳಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 2016ರಲ್ಲಿ ವಜಾಗೊಳಿಸಿತ್ತು. 

ಏಳು ವರ್ಷ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2019ರ ಜನವರಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಆಕ್ಷೇಪಿಸಿ ದೂರುದಾರ ಮಹದೇವ ಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿತ್ತು.

'ಬಿ’ ರಿಪೋರ್ಟ್ ರದ್ದುಪಡಿಸಿದ್ದ ನ್ಯಾಯಾಧೀಶರು, 2019 ಅಕ್ಟೋಬರ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಕುಮಾರಸ್ವಾಮಿ ಸೇರಿದಂತೆ ಪ್ರಕರಣದ ಒಟ್ಟು 19 ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.

ಈ ಕ್ರಮವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ‘ಈ ಆರೋಪಗಳು ಗಂಭೀರ ಸ್ವರೂಪದ್ದು ಆಗಿದ್ದು, ಪ್ರಕರಣದ ತನಿಖೆಯನ್ನು ಹಸ್ತಕ್ಷೇಪ ಮಾಡಲು ಕಾರಣಗಳಿಲ್ಲ’ ಎಂಬ ಕಾರಣ ನೀಡಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಆ ನಂತರ ಕೇಂದ್ರ ಸಚಿವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.