ADVERTISEMENT

ಜಿಂದಾಲ್‌ಗೆ ಜಮೀನು: ನಿಲುವು ಸ್ಪಷ್ಟಪಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 16:04 IST
Last Updated 13 ಜುಲೈ 2021, 16:04 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೊದಲೇ ಸರ್ಕಾರಿ ಆದೇಶ ಹೊರಡಿಸಿ ಬಳಿಕ ಸಂಪುಟದ ಮುಂದೆ ಮಂಡಿಸುವುದೆಂದರೆ ಅದು ‘ಕುದುರೆಯ ಮುಂದೆ ಬಂಡಿ ಇಟ್ಟಂತೆ’ ಆಗಲಿದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಜಮೀನನ್ನು ಜೆಎಸ್‌ಡಬ್ಲ್ಯು ಕಂಪೆನಿಗ ನೀಡುವ ವಿಷಯದಲ್ಲಿ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೆ.ಎ. ಪಾಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘2021ರ ಮೇ 6ರಂದು ಹೊರಡಿಸಿರುವ ಆದೇಶಕ್ಕೆ ಸಂಪುಟದ ಅನುಮೋದನೆ ಇದೆಯೇ’ ಎಂಬುದನ್ನು ಸ್ಪಷ್ಟಪಡಿಸುವಂತೆ ತಿಳಿಸಿತು.

ADVERTISEMENT

ಸಂಪುಟದ ಅನೇಕ ಸಚಿವರು ವಿರೋಧಿಸಿದ್ದರೂ ಕಡಿಮೆ ದರದಲ್ಲಿ ಸರ್ಕಾರಿ ಜಾಗ ಮಾರಾಟ ಮಾಡಲು ಸರ್ಕಾರ ಹೊರಟಿದೆ ಎಂದು ಅರ್ಜಿದಾರರು ಆರೋಪಿಸಿದರು.

‘ಸರ್ಕಾರದ ಆದೇಶವನ್ನು ಸಚಿವ ಸಂಪುಟದ ಮುಂದಿಟ್ಟು ತೀರ್ಮಾನಿಸಲಾಗುವುದು ಎಂದು ಜೂನ್ 15ರ ಮೆಮೊನಲ್ಲಿ ತಿಳಿಸಲಾಗಿದೆ. ಸಚಿವ ಸಂಪುಟದ ತೀರ್ಮಾನ ಆಧರಿಸಿ ಸರ್ಕಾರಿ ಆದೇಶ ಹೊರಡಿಸಬೇಕೆ ಹೊರತು, ಮೊದಲೇ ಸರ್ಕಾರಿ ಆದೇಶ ಹೊರಡಿಸಿ ಬಳಿಕ ಅದನ್ನು ಸಂಪುಟದ ಮುಂದೆ ಇಡಲಾಗುವುದು ಎಂದರೆ ಏನರ್ಥ’ ಎಂದು ‍ಪೀಠ ಪ್ರಶ್ನಿಸಿತು.

ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.