ಸಿದ್ದರಾಮಯ್ಯ
ಪ್ರಜಾವಾಣಿ ಸಂಗ್ರಹ ಚಿತ್ರ
ಬೆಂಗಳೂರು: ‘ಮುಡಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್‌ನವರ ಮಾಡಿರುವ ಆರೋಪಗಳು, ಬಿಡುಗಡೆ ಮಾಡಿರುವ ದಾಖಲೆಗಳೆಲ್ಲ ಅಪ್ಪಟ ಸುಳ್ಳು. ಅಧಿಕೃತ ದಾಖಲೆಗಳು ಇಲ್ಲಿವೆ ನೋಡಿ... ಇವುಗಳು ಬಿಜೆಪಿ– ಜೆಡಿಎಸ್‌ನ ನಾಟಕಗಳನ್ನು ಬಯಲು ಮಾಡುತ್ತವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್‌ನವರು ಮಾಡಿದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.
‘ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅರೆ ಬರೆ ಪತ್ರಗಳನ್ನು ತೋರಿಸಿದ ಬಿಜೆಪಿ, ಜೆಡಿಎಸ್‌ನವರು ರಾಜ್ಯದ ಜನರ ಮುಂದೆ ಜಂಟಿ ಡ್ರಾಮಾ ನಡೆಸಿವೆ’ ಎಂದು ಹರಿಹಾಯ್ದರು.
ಬಿಜೆಪಿ–ಜೆಡಿಎಸ್ ನಾಯಕರು ಎತ್ತಿರುವ ಪ್ರತಿಯೊಂದೂ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸಮೇತ ನೀಡಿದ ಉತ್ತರ ಹೀಗಿದೆ.
ನಿಂಗ ಬಿನ್ ಜವರ ಅವರ ವಾರಸುದಾರ ಪುತ್ರರಲ್ಲೊಬ್ಬರಿಂದ ಬಿ.ಎಂ ಮಲ್ಲಿಕಾರ್ಜುನ್ ಅವರು ಭೂಮಿ ಖರೀದಿ ಮಾಡಿದ್ದು, ಈ ಕ್ರಯಕ್ಕೆ ಪಿ.ಟಿ.ಸಿ.ಎಲ್. ಕಾಯ್ದೆ ಅನ್ವಯಿಸುವುದಿಲ್ಲವೆ?
1935ರ ಆಗಸ್ಟ್ 2ರಂದು ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲ್ಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆಗಿನ ಕೆಳ ಹಂತದ ಅಧಿಕಾರಿಗಳು 1935ರ ಆಗಸ್ಟ್ 15ರಂದು ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಬೇಕೆಂದು ವರದಿ ಸಲ್ಲಿಸಿದ್ದಾರೆ. ಅದರ ಪ್ರಕಾರ, 1935ರ ಸೆಪ್ಟೆಂಬರ್ 26ರಂದು ಹರಾಜು ನೋಟೀಸು ಹೊರಡಿಸಿ, ಹರಾಜು ನಡೆಸಲಾಗಿದೆ. ಹರಾಜು ನಡೆಸಿದ ಮೇಲೆ ₹3 ಹರಾಜು ಇದ್ದು ₹1 ನಿಂಗ ಬಿನ್ ಜವರ ಅವರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಗಿದೆ ಎಂದು ದಾಖಲಿಸಲಾಗಿದೆ. 1935ರ ಅಕ್ಟೋಬರ್ 13ರಂದು ‘ಮಾರಾಟ ಖಾತರಿ’ಯಾಗಿರುವುದನ್ನು ನಮೂದಿಸಿದ್ದಾರೆ. ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೇ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ.
ಖರೀದಿ ಮಾಡಲು ಅವರು ಸರ್ಕಾರದಿಂದ ಅನುಮತಿ ಪಡೆದಿದ್ದರೆ?
ಪಿಟಿಸಿಎಲ್ ಜಮೀನಾಗಿರದೇ ಇರುವುದರಿಂದ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.
ಈ ಜಮೀನುಗಳನ್ನು ಖರೀದಿ ಮಾಡುವಾಗ ವಾರಸುದಾರರನ್ನು ಈ ಭೂ ಕ್ರಯದಿಂದ ಏಕೆ ಹೊರಗಿಡಲಾಗಿತ್ತು?
1993ರ ಏಪ್ರಿಲ್ 10ರಂದು ಒಂದು ವಂಶವೃಕ್ಷ ಮಾಡಿಸಿದ್ದಾರೆ. ಅದರ ಪ್ರಕಾರ ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು. ಮೊದಲನೆಯವರು ಮಲ್ಲಯ್ಯ, ಎರಡನೆಯವರು ಮೈಲಾರಯ್ಯ ಮತ್ತು ಮೂರನೆಯವರು ಜೆ. ದೇವರಾಜು. ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ. ಮೈಲಾರಯ್ಯ ಇವರಿಗೆ ಮಂಜುನಾಥ್‌ಸ್ವಾಮಿ ಎಂ ಎನ್ನುವವರಿದ್ದಾರೆ. ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ. ಮೂರನೆಯವರು ದೇವರಾಜು ಎನ್ನುವವರು. (ಈ ದೇವರಾಜು ಎನ್ನುವವರೆ ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿರುವುದು). ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ ಮಂಜುನಾಥಸ್ವಾಮಿ ಸಹಿ ಮಾಡಿದ್ದಾರೆ.
ಜೆ. ದೇವರಾಜು ಅವರ ಹೆಸರಿಗೆ ಖಾತೆ ಮಾಡಿಕೊಡಲು ಈ ಮೇಲಿನ ಎಲ್ಲರೂ ಸಹಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ. ಸದರಿ ಜಮೀನು ನಿಂಗ ಬಿನ್ ಜವರರವರಿಗೆ ಸೇರಿದ್ದು, ಅವರು ಪೌತಿಯಾಗಿ ನಮಗೆ ಸದರಿ ಜಮೀನಿನಲ್ಲಿ ಭಾಗ ಬರಬೇಕಾಗಿರುವುದಿಲ್ಲ. ಆದ್ದರಿಂದ ಅರ್ಜಿದಾರರಾದ ಜೆ. ದೇವರಾಜುರವರಿಗೆ ಸದರಿ ಜಮೀನುಗಳನ್ನು ಖಾತೆ ಮಾಡುವುದರಲ್ಲಿ ನಮ್ಮಗಳ ತಕರಾರು ಏನೂ ಇರುವುದಿಲ್ಲ’ ಎಂದು ಹೇಳಿಕೆ ಬರೆಯಿಸಿ ಸಹಿ ಮಾಡಿದ್ದಾರೆ. ಇದರ ಆಧಾರದ ಮೇಲೆ ಜೆ.ದೇವರಾಜು ಅವರ ಹೆಸರಿಗೆ ಈ ಜಮೀನುಗಳು ವರ್ಗಾವಣೆಯಾಗಿವೆ. ಕ್ರಯದಾರರ ವಾಸರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿಜೆಪಿಯವರ ಆರೋಪ ಸುಳ್ಳು.
ಭೂಮಿಯನ್ನು ಸಂಪೂರ್ಣವಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಡಿ-ನೋಟಿಫಿಕೇಶನ್ ಮಾಡಬಹುದೇ? ಅಂತಹ ಅಭಿವೃದ್ಧಿ ಹೊಂದಿದ ಅಥವಾ ಭಾಗಶಃ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೇ?
ಯಾವುದೇ ಜಾಗವನ್ನು ಭೂಸ್ವಾಧೀನ ಮಾಡಿ ಭೂಮಿಯ ಪರಿಹಾರ ಪಾವತಿಸಿ ಆ ಭೂಮಿಯ ಸಂಪೂರ್ಣ ಸ್ವಾಧೀನವನ್ನು ತೆಗೆದುಕೊಳ್ಳದ ಹೊರತು ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣವಾಗುವುದಿಲ್ಲ ಎಂಬುದೆ ಕುರಿತು ಅನೇಕ ತೀರ್ಪುಗಳು ಇವೆ ಮತ್ತು ಸರ್ಕಾರದ ಕ್ರಮವೂ ಆಗಿದೆ. ಈ ಜಮೀನುಗಳನ್ನು 1998ರ ಮೇ 18ರಲ್ಲಿ ಕೈಬಿಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984ರಿಂದ ಒಟ್ಟು 13 ಬಡಾವಣೆಗಳಲ್ಲಿ 235 ಎಕರೆ 30 ಗುಂಟೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ. ಹಾಗಾಗಿ ಭೂಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಸ್ವಾಧೀನ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ. ಹಾಗಾಗಿ ಬಿಜೆಪಿಯವರು ಎತ್ತಿರುವ ಈ ಪ್ರಶ್ನೆಯೇ ಅಸಂಗತ.
ಸರ್ಕಾರದ ಅನುಮತಿಯಿಲ್ಲದೆ 50:50 ಯೋಜನೆಯನ್ನು ಹೇಗೆ ಜಾರಿಗೆ ಬಂತು?
ನಮ್ಮ ಕುಟುಂಬಕ್ಕೆ ಈ ಜಮೀನುಗಳು ಬರುವ ವೇಳೆಗಾಗಲೆ 2005ರ ಜುಲೈ 15ರಲ್ಲಿ ಅವೆಲ್ಲ ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿವೆ. 2014ರ ಜೂನ್ 23 ಮತ್ತು 2021ರ ಅಕ್ಟೋಬರ್ 25ರಂದು ಭೂ ಪರಿಹಾರಕ್ಕೆ ಬದಲಾಗಿ ಪರ್ಯಾಯ ಜಾಗವನ್ನು ಕೊಡಬೇಕೆಂದು ಅರ್ಜಿ ಹಾಕಲಾಗಿದೆ.
–‘ತನ್ನ ನಿವೇಶನ/ ಜಾಗ ಜಾಗವನ್ನು ಮುಡಾ ಬಳಸಿಕೊಂಡಿದೆ. ಅದಕ್ಕೆ ಪರ್ಯಾಯ ಜಾಗ ಕೊಡಿ’ ಎಂದು ನನ್ನ ಪತ್ನಿ ಕೇಳಿದ್ದಾರೆ. ಮುಡಾದವರು ಕೊಟ್ಟಿದ್ದಾರೆ ಅಷ್ಟೆ.
–ಭೂ ಸ್ವಾಧೀನಪಡಿಸದೇ ಭೂಮಿಯನ್ನು ಉಪಯೋಗಿಸಿಕೊಂಡ ಪ್ರಕರಣಗಳಲ್ಲಿ ಉಪಯೋಗಿಸಲಾದ ಭೂಮಿಗೆ ಪರ್ಯಾಯವಾಗಿ ಶೇ 50:50ರ ಅನುಪಾತದಲ್ಲಿ ಜಾಗವನ್ನು ಕೊಡಬೇಕೆಂದು ಪ್ರಾಧಿಕಾರದವರು 2020ರ ಸೆಪ್ಟೆಂಬರ್ 14ರಂದು ನಿರ್ಣಯ ಮಾಡಿದ್ದಾರೆ. ಈ ನಿರ್ಣಯವನ್ನು ಸರ್ಕಾರ ರದ್ದು ಮಾಡಿದೆ. 2020ರ ಡಿಸೆಂಬರ್ 7ರಂದು ಮತ್ತೆ ಚರ್ಚೆ ಮಾಡಿ ಇನ್ನೊಂದು ನಿರ್ಣಯ ಮಾಡಿದ್ದಾರೆ. ಆ ಸಭೆಯಲ್ಲಿ ಜೆಡಿಎಸ್ ಶಾಸಕರಾದ ಜಿ. ಟಿ. ದೇವೇಗೌಡ ಅವರು ‘ಶೇ 50:50ರ ಅನುಪಾತದಲ್ಲಿ ಒಪ್ಪಿಕೊಳ್ಳುವ ರೈತರಿಗೆ ಅದೇ ರೀತಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು, ಶೇ 50:50 ರ ಅನುಪಾತಕ್ಕೆ ಒಪ್ಪಿಕೊಳ್ಳದ ಹಾಗೂ ಸಹಮತ ಸೂಚಿಸದ ಪ್ರಕರಣಗಳಲ್ಲಿ ಪ್ರತ್ಯೇಕ ಸಭೆ ಕರೆಯಲು ಸೂಚಿಸಿದರು’ ಎಂದು ದಾಖಲಾಗಿದೆ. ಮರಿತಿಬ್ಬೇಗೌಡ ಅವರು, ‘ಶೇ 50:50 ಅನುಪಾತದಲ್ಲಿ ರೈತರನ್ನು ಬಲವಂತಪಡಿಸಲು ಬರುವುದಿಲ್ಲವೆಂದು ಈ ಕಾರಣ ರೈತರ ಕೋರಿಕೆಯನ್ನು ಪರಿಗಣಿಸಬೇಕು, ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಸ್ವತ್ತುಗಳಿಗೆ ಅಷ್ಟೇ ವಿಸ್ತೀರ್ಣದ ಸ್ವತ್ತುಗಳನ್ನು ನೀಡುವುದು ಸೂಕ್ತವೆಂದು’ ಹೇಳಿದ್ದಾರೆ. ಸಭೆಯಲ್ಲಿ ಅಂದು ಬಿಜೆಪಿ ಶಾಸಕರಾಗಿದ್ದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜೆಡಿಎಸ್‌ನ ಸಂದೇಶ್ ನಾಗರಾಜ್ ಮಾತನಾಡಿದ್ದಾರೆ.
–‘ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂ ಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವಂತಹ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ 50 ವಿಸ್ತೀರ್ಣದ ಅಭಿವೃದ್ಧಿಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದು’ ಎಂದು ಅಂತಿಮವಾಗಿ ನಿರ್ಣಯಿಸಲಾಗಿದೆ.
– ‘ಇದೆಲ್ಲ ಆದ ಮೇಲೆ ನನ್ನ ಪತ್ನಿ 2021ರ ಅಕ್ಟೋಬರ್ 23ರಂದು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, ‘ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ 50:50ರ ಅನುಪಾತದಲ್ಲಿ ಕೊಡಿ’ ಎಂದು ಕೇಳಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು, ಕೆಸರೆ ಗ್ರಾಮದ ಸ.ನಂ. 464ರ 3 ಎಕರೆ 16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು, 2021ರ ಡಿಸೆಂಬರ್ 30ರಂದು ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿದ್ದಾರೆ. 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.