ADVERTISEMENT

ಬಡ ರೈತರ ವಿರುದ್ಧ ಭೂ ಕಬಳಿಕೆ ಆರೋಪ

ಮೊಕದ್ದಮೆ ದಾಖಲು: ಸಣ್ಣ ರೈತರಿಗೆ ಬೆಂಗಳೂರಿಗೆ ಅಲೆಯುವ ಶಿಕ್ಷೆ

ಶಿವಾನಂದ ಕರ್ಕಿ
Published 6 ಸೆಪ್ಟೆಂಬರ್ 2018, 19:30 IST
Last Updated 6 ಸೆಪ್ಟೆಂಬರ್ 2018, 19:30 IST
ಮುನಿಯೂರು ಗ್ರಾಮದಲ್ಲಿ ಸರ್ಕಾರಿ ಭೂ ಕಬಳಿಕೆದಾರರು ಎಂದು ಕಂದಾಯ ಇಲಾಖೆ ಗುರುತಿಸಿದ ಬಗರ್‌ಹುಕುಂ ಸಾಗುವಳಿ ರೈತರು
ಮುನಿಯೂರು ಗ್ರಾಮದಲ್ಲಿ ಸರ್ಕಾರಿ ಭೂ ಕಬಳಿಕೆದಾರರು ಎಂದು ಕಂದಾಯ ಇಲಾಖೆ ಗುರುತಿಸಿದ ಬಗರ್‌ಹುಕುಂ ಸಾಗುವಳಿ ರೈತರು   

ತೀರ್ಥಹಳ್ಳಿ: ಬದುಕು ಕಟ್ಟಿಕೊಳ್ಳಲು ಆಸರೆಯಾದ ಭೂಪ್ರದೇಶ ಬಡವರ ಪಾಲಿಗೆ ಉರುಳಾಗಿ ಪರಿಣಮಿಸಿದ್ದು,ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಸಾವಿರಾರು ಬಡ ಕುಟುಂಬಗಳ ಜನ, ಸೆರೆಮನೆ ವಾಸ ಅನುಭವಿಸುವ ಭೀತಿಯಲ್ಲಿದ್ದಾರೆ.

ತಾಲ್ಲೂಕಿನ ಅನೇಕ ಕಡೆಗಳಲ್ಲಿ ನೆಲೆ ಕಂಡುಕೊಂಡಿದ್ದ ಬಡ ಕುಟುಂಬಗಳ ವಾಸದ ಮನೆಯ ಸುತ್ತಲಿನ ಸಣ್ಣ ಪ್ರದೇಶವನ್ನೂ ಭೂ ಕಬಳಿಕೆ ವ್ಯಾಪ್ತಿ ಪ್ರದೇಶ ಎಂದು ಗುರುತಿಸಲಾಗಿದ್ದು, ಭೂ ಕಬಳಿಕೆ ಕಾಯ್ದೆ ಅನುಷ್ಠಾನದಿಂದಾಗಿ ಅತಿ ಸಣ್ಣ ರೈತರೂ ತೊಂದರೆಗೆ ಸಿಲುಕಿದ್ದಾರೆ.

ತಾಲ್ಲೂಕಿನ ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿಯೂರು ಗ್ರಾಮದ ಆರು ಮಂದಿ ಅತಿ ಸಣ್ಣ ಬಡ ರೈತರ ವಿರುದ್ಧ ಭೂ ಕಬಳಿಕೆ ಮೊಕದ್ದಮೆ ದಾಖಲಿಸಿರುವ ಕಂದಾಯ ಇಲಾಖೆ, ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.ಈ ಬಡ ರೈತರು ದೂರದ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹೋಗಿ ಹೋರಾಡಲು ಶಕ್ತಿ ಇಲ್ಲದೆ ಕಂಡ ಕಂಡವರಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ನೀಡಿರುವ ದೂರಿನಿಂದಾಗಿಯೂ ಭೂ ಕಬಳಿಕೆ ಮೊಕದ್ದಮೆ ದಾಖಲಾಗುತ್ತಿದೆ. ಕಂದಾಯ, ಅರಣ್ಯ ಭೂ ಪ್ರದೇಶದ ಒತ್ತುವರಿ ತೆರವಿನ ತೆರವು ಕಾನೂನು ಕ್ರಮಕ್ಕೆ 2012ರ ಭೂ ಕಬಳಿಕೆ ನಿಷೇಧ ಕಾಯ್ದೆ ಭೂ ಕಂದಾಯ 192(ಎ) ನಿಯಮದ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 130 ಎಕರೆ ಸರ್ಕಾರಿ ಭೂ ಪ್ರದೇಶದ ಒತ್ತುವರಿ ಸಂಬಂಧ 75 ರೈತರ ಮೇಲೆ ಕಂದಾಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಮುನಿಯೂರು ಗ್ರಾಮದ ಸರ್ವೆ ನಂಬರ್ 112ರಲ್ಲಿ 6 ಮಂದಿ ರೈತರ ವಿರುದ್ಧ 2017ರ ಮೇ 15ರಂದು ಕೇವಲ 3 ಗುಂಟೆ ವಿಸ್ತೀರ್ಣದ ಒತ್ತುವರಿ ಪ್ರದೇಶ ಗುರುತಿಸಿ ಕಂದಾಯ ಇಲಾಖೆ ಕ್ರಿಮಿನಲ್ ಪ್ರಕರಣ ಹೂಡಿದೆ. 2018ರ ಸೆಪ್ಟೆಂಬರ್ 25ರಂದು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಕಂದಾಯ, ಅರಣ್ಯ ಇಲಾಖೆಗೆ ಸೇರಿದ ಭೂ ಪ್ರದೇಶದ ವಿಸ್ತೀರ್ಣ ಹಾಗೂ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು ಗೊಂದಲದ ಗೂಡಾಗಿವೆ. ಪಹಣಿ, ಮ್ಯುಟೇಷನ್, ಸರ್ವೆ ಹದ್ದುಬಸ್ತು ಒಳಗೊಂಡಂತೆ ಅಗತ್ಯ ದಾಖಲೆಗಳು ತಾಳೆಯಾಗುತ್ತಿಲ್ಲ. ಹೀಗಾಗಿ ತೆರವು ಪ್ರಕ್ರಿಯೆಯೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒತ್ತುವರಿ ಪ್ರದೇಶದಿಂದ ಜನರನ್ನು ತೆರವುಗೊಳಿಸಿದರೆ ಅವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಹೊಣೆಯಲ್ಲವೇ ಎಂದೂ ಕೇಳುತ್ತಿದ್ದಾರೆ.

ದರಖಾಸ್ತು ಹೆಸರಿನಲ್ಲಿ ಭೂ ಸಾಗುವಳಿಗೆ ಮಂಜೂರಾತಿ ನೀಡಿದ ಸರ್ಕಾರ, ನಂತರದ ವರ್ಷಗಳಲ್ಲಿ ಬಗರ್‌ಹುಕುಂ ಹೆಸರಿನಲ್ಲಿ ಮಂಜೂರಾತಿಗೆ ಅರ್ಜಿ ಸ್ವೀಕರಿಸಿದೆ. ಬಗರ್‌ಹುಕುಂ ಭೂ ಸಾಗುವಳಿಗೆ ಪ್ರೋತ್ಸಾಹ ದೊರೆತ ನಂತರ ಭೂರಹಿತರು ಭೂಮಿ ಹೊಂದುವ ಕನಸಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈಗ ಬಗರ್‌ಹುಕುಂ ಸಾಗುವಳಿ ರೈತರನ್ನೂ ಭೂ ಕಬಳಿಕೆದಾರರು ಎಂದು ಗುರುತಿಸಿರುವ ಕ್ರಮ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.

*
ಭೂ ಕಬಳಿಕೆ ಮೊಕದ್ದಮೆ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಬೇಕು. ಈ ಕುರಿತು ಸಚಿವರೊಂದಿಗೆ ಚರ್ಚಿಸಿದ್ದೇನೆ. ರೈತರಿಗೆ ನೆರವಾಗಲು ವಕೀಲರನ್ನು ನಿಯೋಜಿಸಲಾಗಿದೆ.
-ಕಿಮ್ಮನೆ ರತ್ನಾಕರ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.