ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ‘ಭೂ ಒಡೆತನ ಯೋಜನೆ’ ಅಡಿ ಜಮೀನು ಹಂಚಿಕೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಲ್ಲಿಸಬೇಕು ಎಂದು ನಿಗಮದ ತುಮಕೂರು ಜಿಲ್ಲಾ ವ್ಯವಸ್ಥಾಪಕರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚಿಸಿದ್ದಾರೆ.
ನಿಗಮದ ತುಮಕೂರು ಜಿಲ್ಲಾ ಕಚೇರಿ ಮೂಲಕ ಜಮೀನು ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಬಗ್ಗೆ ಬಂದಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಲೋಕಾಯುಕ್ತರು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ನಡೆದ ವಿಚಾರಣೆ ವೇಳೆ ನಿಗಮದ ತುಮಕೂರು ಜಿಲ್ಲಾ ವ್ಯವಸ್ಥಾಪಕರನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
2011ರಿಂದ 2024ರ ಅಂತ್ಯದವರೆಗೆ ತುಮಕೂರು ಕಚೇರಿ ಮೂಲಕ ಒಟ್ಟು 119 ಎಕರೆ 19 ಗುಂಟೆ ಜಮೀನನ್ನು ಖರೀದಿಸಲಾಗಿದೆ. ಇದನ್ನು 63 ಫಲಾನುಭವಿಗಳಿಗೆ ವಿತರಿಸಲಾಗಿದೆ. ಇದಕ್ಕಾಗಿ ₹2.51 ಕೋಟಿ ವೆಚ್ಚ ಮಾಡಲಾಗಿದೆ. ಈ ಸಂಬಂಧ ಒಟ್ಟು 23 ಕಡತಗಳು ಇರಬೇಕಿತ್ತು. ಆದರೆ ಅವುಗಳ ಪೈಕಿ ಏಳು ಕಡತಗಳು ಇಲ್ಲವೇ ಇಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
ಫಲಾನುಭವಿಗಳಿಗೆ ಭೂಮಿ ನೀಡಿದ್ದರೂ, ಆರ್‌ಟಿಸಿಯಲ್ಲಿ ಋಣಭಾರ ಮತ್ತಿತರ ವಿವರಗಳನ್ನು ಹತ್ತಾರು ವರ್ಷ ಕಳೆದರೂ ನಮೂದಿಸಿಲ್ಲ ಎಂಬುದು ಲಭ್ಯವಿರುವ ಕಡತಗಳ ಪರಿಶೀಲನೆಯಲ್ಲಿ ಗೊತ್ತಾಗಿದೆ. ಈ ಕಾರ್ಯಗಳನ್ನು ಪೂರ್ಣಗೊಳಿಸಿ, ಲಭ್ಯವಿಲ್ಲದೇ ಇರುವ ಕಡತಗಳನ್ನು ಪತ್ತೆ ಹಚ್ಚಿ ಸಲ್ಲಿಸಿ ಎಂದು ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದ್ದು, ಎಲ್ಲ ಕಡತಗಳನ್ನು ತಪ್ಪದೇ ಸಲ್ಲಿಸಬೇಕು. ನಿಗಮದ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು ಇದರ ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿರುವುದಾಗಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.