ADVERTISEMENT

ನಿವೇಶನ ಖರೀದಿ: ಸಮಗ್ರ ಯೋಜನೆಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:30 IST
Last Updated 10 ಅಕ್ಟೋಬರ್ 2025, 0:30 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಮಂಜೂರಾದ ನಕ್ಷೆಗಳ ಭಾಗವಲ್ಲದ ಪರಿವರ್ತಿತ ಜಮೀನಿನಲ್ಲಿ ಗ್ರಾಹಕರು ನಿವೇಶನಗಳನ್ನು ಖರೀದಿಸುತ್ತಿರುವ ಪ್ರಕರಣ ಹೆಚ್ಚುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಇಂತಹ ವಹಿವಾಟುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಇ-ಖಾತಾ ನೀಡಲು ಹೊಳಲ್ಕೆರೆ ಟೌನ್‌ ಪಂಚಾಯಿತಿಗೆ ನಿರ್ದೇಶಿಸಬೇಕು’ ಎಂದು ಕೋರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿ ನಂದಿಹಳ್ಳಿಯ ಯು.ಮಮತಾ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಶಂಕರ ಎಸ್‌.ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಸೂಕ್ತ ಮಾರ್ಗಸೂಚಿ ಅಥವಾ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರ ಕಲಂ 17(2ಬಿ) ಉದ್ದೇಶಕ್ಕೆ ಅನುಗುಣವಾಗಿ ಕ್ರಮಬದ್ಧಗೊಳಿಸುವ ಕಾರ್ಯವಿಧಾನವನ್ನು ರೂಪಿಸದ ಹೊರತು, ವೈಯಕ್ತಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಾಸನಬದ್ಧ ಆದೇಶವನ್ನು ಮೀರಿ ಕಾನೂನಿಗೆ ವಿರುದ್ಧವಾದ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ಕಾಯ್ದೆಯ ಉಪ ಕಲಂ ಸೇರ್ಪಡೆಯ ಹಿಂದಿನ ಉದ್ದೇಶವೆಂದರೆ ನಗರ ಪ್ರದೇಶಗಳ ಕ್ರಮಬದ್ಧತೆಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು, ನಾಗರಿಕ ಸೌಲಭ್ಯಗಳನ್ನು ಸರಿಯಾಗಿ ಒದಗಿಸುವುದು ಮತ್ತು ಸಾರ್ವಜನಿಕ ಮೂಲಸೌಕರ್ಯಕ್ಕೆ ಹೊರೆಯಾಗುವ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಅಕ್ರಮ ಬಡಾವಣೆಗಳನ್ನು ನಿಯಂತ್ರಿಸುವುದೇ ಆಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

‘ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಬಡಾವಣೆಗಳ ನಿವೇಶನಗಳಿಗೆ ಸಂಬಂಧಿಸಿದಂತೆ ಇ-ಖಾತಾ ನೀಡುವುದನ್ನು ಸರ್ಕಾರದ ಸುತ್ತೋಲೆಗಳು ನಿರ್ದಿಷ್ಟವಾಗಿ ನಿಷೇಧಿಸುತ್ತವೆ’ ಎಂಬ ಪಟ್ಟಣ ಪಂಚಾಯಿತಿ ಪರ ವಕೀಲರ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು. ‘ನಗರಾಭಿವೃದ್ಧಿ ಮತ್ತು ಮುಗ್ಧ ಖರೀದಿದಾರರ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದೇ ಶಾಸಕಾಂಗದ ಉದ್ದೇಶವಾಗಿದೆ. ಅಂತೆಯೇ, ನಾಗರಿಕ ಮೂಲಸೌಕರ್ಯ ಮತ್ತು ಪಟ್ಟಣಗಳ ಯೋಜಿತ ಬೆಳವಣಿಗೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದೂ ಅದರ ಹಿಂದಿನ ಆಶಯವಾಗಿದೆ’ ಎಂಬುದು ಮನನೀಯ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.