ADVERTISEMENT

ಮಧ್ಯಂತರ ಅರ್ಜಿ: ನೋಟಿಸ್‌ ಜಾರಿಗೆ ಆದೇಶ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ಎರಡನೇ ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 22:10 IST
Last Updated 9 ನವೆಂಬರ್ 2020, 22:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗಳನ್ನು ಜಾರಿಗೊಳಿಸಲು ಎರಡನೇ ಬಾರಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ನಾಗರಾಜ ಹೊಂಗಲ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್‌ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೆ ಆದೇಶಿಸಿದೆ.

ತಿದ್ದುಪಡಿ ಜಾರಿಗೊಳಿಸಿ ಜುಲೈ 13ರಂದು ಮೊದಲ ಬಾರಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ನಾಗರಾಜ ಹೊಂಗಲ್‌ ಮತ್ತು ಇತರ ಏಳು ಮಂದಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ತಿದ್ದುಪಡಿ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ದೊರೆಯದ ಕಾರಣ ನವೆಂಬರ್‌ 2ರಂದು ಎರಡನೇ ಬಾರಿಗೆ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಇದರಿಂದಾಗಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೊದಲ ಅರ್ಜಿಗಳು ಅಮಾನ್ಯಗೊಳ್ಳುವ ಸ್ಥಿತಿ ಎದುರಾಗಿತ್ತು.

ನ.4ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದ ನಾಗರಾಜ ಹೊಂಗಲ್‌, ಮೂಲ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಕೋರಿದ್ದರು. ಸೋಮವಾರದ ವಿಚಾರಣೆ ವೇಳೆ ಈ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೆ ಆದೇಶಿಸಿತು. ಡಿಸೆಂಬರ್‌ 1ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ADVERTISEMENT

ಇತರ ಅರ್ಜಿದಾರರೂ ಮೂಲ ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು ಮಧ್ಯಂತರ ಅರ್ಜಿ ಸಲ್ಲಿಸಲು ಅನುಮತಿ ಕೋರಿದರು. ಈ ಮನವಿಗೆ ನ್ಯಾಯಪೀಠ ಒಪ್ಪಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.