ADVERTISEMENT

ನಕಲಿ ದಾಖಲೆ ಸೃಷ್ಟಿಸಿ ₹350 ಕೋಟಿ ಜಮೀನು ಪರಭಾರೆ

ಮೂಲ ದಾಖಲೆಯೇ ಇಲ್ಲ ಎಂದು ತಹಶೀಲ್ದಾರ್ ಹೇಳಿದ್ದರೂ ಅರ್ಜಿದಾರರಿಗೆ ಜಮೀನು ನೀಡಿದ್ದ ವಿಶೇಷ ಜಿಲ್ಲಾಧಿಕಾರಿ

ಜಯಸಿಂಹ ಆರ್.
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದ ನಾಲ್ವರು ಖಾಸಗಿ ವ್ಯಕ್ತಿಗಳಿಗೆ, ಬೆಂಗಳೂರಿನ ಹಿಂದಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಬಿ.ವಿ.ವಾಸಂತಿ ಅಮರ್ ಅವರು 14 ಎಕರೆ ಸರ್ಕಾರಿ ಜಮೀನನ್ನು ಪರಭಾರೆ ಮಾಡಿದ ಪ್ರಕರಣವೊಂದು ಪತ್ತೆಯಾಗಿದೆ. 

ADVERTISEMENT

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿಯ ಸರ್ವೆ ನಂಬರ್ 86ರ ಈ ಜಮೀನಿನ ಮಾರುಕಟ್ಟೆ ಮೌಲ್ಯ ₹350 ಕೋಟಿ ಎಂದು ಅಂದಾಜಿಸಲಾಗಿದೆ. ಅರ್ಜಿದಾರರ ಮನವಿಯನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯು ಈ ಹಿಂದೆಯೇ ಎರಡು ಬಾರಿ ತಿರಸ್ಕರಿಸಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ ಪರಭಾರೆ ಮಾಡಲಾಗಿದೆ.

ನೈಸ್‌ ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ಜಮೀನಿಗೆ ಸಂಬಂಧಿಸಿದಂತೆ, 2007ರಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಪುಟ್ಟಮ್ಮ, ಎಚ್‌.ಬಿ.ಶ್ರೀಧರ್‌, ಕೆ.ವಿ.ಚಂದ್ರನ್‌ ಮತ್ತು ಪುಟ್ಟಗೌರಮ್ಮ ಅವರು ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

‘ಸರ್ವೆ ಸಂಖ್ಯೆ: 86ರ (ಹೊಸ ಸರ್ವೆ ಸಂಖ್ಯೆ 143, 144, 145 ಮತ್ತು 147) ಸುಮಾರು 14 ಎಕರೆ ಜಮೀನು ತಮಗೆ 1954ರಲ್ಲೇ ಸರ್ಕಾರದಿಂದ ಮಂಜೂರಾಗಿದೆ. ಅಂದಿನಿಂದ 1995ರವರೆಗೂ ಪಹಣಿಯಲ್ಲಿ ತಮ್ಮ ಹೆಸರು ಇದ್ದು, 1995ರ ನಂತರ ಪಹಣಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ. ಕಂದಾಯ ದಾಖಲೆಗಳಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ತಹಶೀಲ್ದಾರರಿಗೆ ನಿರ್ದೇಶನ ನೀಡಿ’ ಎಂದು ಹೈಕೋರ್ಟ್‌ ಅನ್ನು ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ದಾಖಲೆಗಳನ್ನು ಪರಿಶೀಲಿಸಿ ಮೂರು ತಿಂಗಳಲ್ಲಿ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿತ್ತು. ಆದರೆ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯು ಕ್ರಮ ತೆಗೆದುಕೊಂಡಿಲ್ಲ, ತಮ್ಮ ಹೆಸರನ್ನು ಕಂದಾಯ ದಾಖಲೆಗೆ ಸೇರಿಸಿಲ್ಲ ಎಂದು ನಾಲ್ವರು ಅರ್ಜಿದಾರರು ನ್ಯಾಯಾಂಗ ನಿಂದನೆ ದಾವೆ ಹೂಡಿದ್ದರು. ಆ ಅರ್ಜಿಯ ವಿಚಾರಣೆ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ಅವರಿಂದ ಹೈಕೋರ್ಟ್‌ ವಿವರಣೆ ಕೇಳಿತ್ತು.

ಜಿಲ್ಲಾಧಿಕಾರಿಯು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗಿದೆ. ಅರ್ಜಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ’ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.

‘ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ನಾಲ್ವರು ಅರ್ಜಿದಾರರಿಗೂ 1954ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು ಲಭ್ಯವಿಲ್ಲ. ಬದಲಿಗೆ ದರಾಖಾಸ್ತು ಭೂಮಿ ಪಡೆದವರ ಪಟ್ಟಿಯಲ್ಲಿ ಈ ನಾಲ್ವರ ಹೆಸರನ್ನು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸರ್ಕಾರಿ ದಾಖಲೆಗಳನ್ನು ತಿದ್ದಲಾಗಿದೆ’ ಎಂದು ವಿವರಿಸಿದ್ದರು.

‘ಮೂಲ ಪಟ್ಟಿಯಲ್ಲಿ ಈ ನಾಲ್ವರಿಗಿಂತಲೂ ಮೊದಲು ಇರುವವರ ಹೆಸರು ಮತ್ತು ಈ ನಾಲ್ವರ ನಂತರ ಇರುವ ಹೆಸರುಗಳ ಕೈಬರಹ ಹಾಗೂ ಪೆನ್ನಿನ ಇಂಕ್‌ ಒಂದೇ ರೀತಿ ಇದೆ. ಆದರೆ ಈ ನಾಲ್ವರ ಹೆಸರಿನ ಕೈಬರಹ ಹಾಗೂ ಪೆನ್ನಿನ ಇಂಕ್‌ ಬೇರೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳೂ ಭಾಗಿಯಾಗಿ ಈ ನಾಲ್ವರ ಹೆಸರನ್ನು ಸೇರಿಸಿರುವುದು ಪತ್ತೆಯಾಗಿದೆ. ನಾಲ್ವರೂ ನಕಲಿ ಸಾಗುವಳಿ ಚೀಟಿಗಳನ್ನು ಸೃಷ್ಟಿಸಿದ್ದಾರೆ ಜತೆಗೆ ಪಹಣಿಗಳನ್ನು ತಿದ್ದಿಸಿದ್ದಾರೆ ಎಂದು ತಹಶೀಲ್ದಾರರು ವರದಿ ನೀಡಿದ್ದಾರೆ’ ಎಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ವರದಿ ನೀಡಿದ ನಂತರ ಹೈಕೋರ್ಟ್‌ ನ್ಯಾಯಾಂಗ ನಿಂದನೆ ದಾವೆಯನ್ನು ಕೈಬಿಟ್ಟಿತ್ತು. ಅರ್ಜಿದಾರರು ಮತ್ತು ದಾಖಲೆ ತಿದ್ದುವಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿ ಎಂದು ಆದೇಶಿಸಿತ್ತು. 

ಈ ಮಧ್ಯೆ 2015 ರಲ್ಲಿ ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ–3 ಅವರ ನ್ಯಾಯಾಲಯಕ್ಕೆ ಪುಟ್ಟಮ್ಮ, ಎಚ್‌.ಬಿ.ಶ್ರೀಧರ್‌, ಕೆ.ವಿ.ಚಂದ್ರನ್‌ ಮತ್ತು ಪುಟ್ಟಗೌರಮ್ಮ ಅವರು ಅರ್ಜಿ ಸಲ್ಲಿಸಿ, ಸದರಿ ಜಮೀನನ್ನು ಪರಭಾರೆ ಮಾಡಿಕೊಡಿ ಎಂದು ಕೋರಿದ್ದರು. ಆದರೆ ಆಗಿನ ವಿಶೇಷ ಜಿಲ್ಲಾಧಿಕಾರಿಯು ಅರ್ಜಿಯನ್ನು ಪರಿಗಣಿಸಿರಲಿಲ್ಲ. 2021ರಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಬಂದ ವಾಸಂತಿ ಅಮರ್ ಅವರು, ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದರು. ಉತ್ತರ ತಾಲ್ಲೂಕಿನ ತಹಶೀಲ್ದಾರ್ ಅವರಿಂದ ವಿವರಣೆ ಕೋರಿದ್ದರು.

‘ನಾಲ್ವರಿಗೂ 1954ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು, ನಕಲು ಪ್ರತಿಗಳೂ ಲಭ್ಯವಿಲ್ಲ. ಅರ್ಜಿದಾರರ ಪಹಣಿ, ಸಾಗುವಳಿ ಚೀಟಿ ಮಾತ್ರವೇ ಲಭ್ಯವಿದೆ’ ಎಂದು ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ವರದಿ ನೀಡಿದ್ದರು. ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತಹಶೀಲ್ದಾರ್ ವರದಿ, ಈ ಹಿಂದೆ ನಡೆದಿದ್ದ ವಿಚಾರಣೆಗಳು, ನ್ಯಾಯಾಲಯ ಪ್ರಕ್ರಿಯೆಗಳನ್ನು ಈ ವರದಿಯಲ್ಲಿ ಉಲ್ಲೇಖಿಸಿರಲಿಲ್ಲ.

ಅದನ್ನೇ ಪರಿಗಣಿಸಿದ್ದ ವಾಸಂತಿ ಅಮರ್ ಅವರು ಅರ್ಜಿದಾರರಾದ ಕೆ.ವಿ.ಚಂದ್ರನ್‌ ಅವರಿಗೆ 4 ಎಕರೆ, ಬಿ.ಎಚ್‌.ಶ್ರೀಧರ್ ಅವರಿಗೆ 4 ಎಕರೆ, ಪುಟ್ಟಗೌರಮ್ಮ ಅವರಿಗೆ 3 ಎಕರೆ ಮತ್ತು ಪುಟ್ಟಮ್ಮ ಅವರಿಗೆ 3 ಎಕರೆ ಪರಭಾರೆ ಮಾಡಿ 2023ರ ಜುಲೈ ಮತ್ತು 2025ರ ಮಾರ್ಚ್‌ನಲ್ಲಿ ಆದೇಶಿಸಿದ್ದರು. 

ಆದರೆ ಈ ಜಮೀನನ್ನು ರಾಜ್ಯ ಸರ್ಕಾರವು ಗೋಮಾಳ ಎಂದು ಅಧಿಸೂಚನೆ ಹೊರಡಿಸಿತ್ತು. 1998ರಲ್ಲಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಯ ಭಾಗವಾಗಿ ಸದರಿ ಜಮೀನನ್ನು ನೈಸ್‌ ಸಂಸ್ಥೆಗೆ ನೀಡಿತ್ತು. ವಾಸಂತಿ ಅಮರ್ ಅವರು ವಿಶೇಷ ಜಿಲ್ಲಾಧಿಕಾರಿ–3 ಆಗಿದ್ದಾಗ ನೀಡಿದ ಆದೇಶದ ಆಧಾರದಲ್ಲಿ ಅರ್ಜಿದಾರರು ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಮುಂದಾದಾಗ, ನೈಸ್‌ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿದೆ.

ವಾಸಂತಿ ವಿರುದ್ಧ ಮತ್ತೊಂದು ಎಫ್‌ಐಆರ್

ಸರ್ಕಾರಿ ಜಮೀನಿಗೆ ನಿಯಮ ಬಾಹಿರವಾಗಿ ಆದೇಶ ಹೊರಡಿಸಿದ ಆರೋಪದ ಅಡಿ ಐಎಎಸ್‌ ಅಧಿಕಾರಿ ವಾಸಂತಿ ಅಮರ್‌ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಇದೇ ಜುಲೈ 15 ರಂದು ಎಫ್‌ಐಆರ್ ದಾಖಲಾಗಿತ್ತು.

‘ಬೆಂಗಳೂರಿನ ಹಿಂದಿನ ವಿಶೇಷ ಜಿಲ್ಲಾಧಿಕಾರಿ–3 ವಾಸಂತಿ ಅಮರ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದ ಸರ್ವೆ ನಂಬರ್ 8ರಲ್ಲಿ 10 ಎಕರೆ 20 ಗುಂಟೆ ಸರ್ಕಾರಿ
ಜಮೀನಿಗೆ ಸಂಬಂಧಿಸಿದಂತೆ ನಿಯಮಬಾಹಿರ ಆದೇಶ ಹೊರಡಿಸಿದ್ದಾರೆ’ ಎಂದು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರಶಾಂತ್‌ ಖಾನಗೌಡ ಪಾಟೀಲ್ ಅವರು ಹಲಸೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

ಆ ದೂರು ಆಧರಿಸಿ ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು.
 48ನೇ ಎಸಿಎಂಎಂ ನ್ಯಾಯಾಲಯದ ಎದುರು ದೂರುದಾರರು ಹಾಜರಾಗಿ ಎನ್‌ಸಿಆರ್ ಪ್ರಕರಣದ ತನಿಖೆಗೆ ಮನವಿ ಮಾಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 257ರ ಅಡಿ ಮಂಗಳವಾರ ಎಫ್‌ಐಆರ್ ದಾಖಲು ಮಾಡಿಕೊಳ್ಳ ಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.