ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಹೆಸರಲ್ಲಿ ತಮಗೆ ಬೇಕಾದವರಿಗಾಗಿ ಜಮೀನು ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ 2,000ದಿಂದ 3,000 ಎಕರೆ ಹಂಚಿಕೆ ಮಾಡಿ, ಕಬಳಿಸಲು ಮುಂದಾಗಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಡದಿ ಟೌನ್‌ಶಿಪ್ ಮಾಡಿದ್ದು ನಾನೇ. ₹60,000 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಮಿತಿಯಿಂದಲೂ ಅನುಮೋದನೆ ಪಡೆದಿದ್ದೆ. ನನ್ನ ಸರ್ಕಾರ ಬಿದ್ದ ಮೇಲೆ ಅದು ಅಲ್ಲಿಗೇ ನಿಂತಿತು. ನನ್ನ ಕನಸಿನ ಯೋಜನೆಯನ್ನು ಈಗ ಜಾರಿಗೆ ತರುತ್ತಿದ್ದಾರಂತೆ. ಆದರೆ, ಅವರು ಜನರಿಗಾಗಿ ಏನೂ ಮಾಡುತ್ತಿಲ್ಲ’ ಎಂದು ಟೀಕಿಸಿದರು.
‘ಶಿವಕುಮಾರ್ ಎಷ್ಟು ಜನರ ಮನೆ ಹಾಳುಮಾಡಿದ್ದಾರೆ. ಶಾಂತಿನಗರ ಹೌಸಿಂಗ್ ಸೊಸೈಟಿ ಪ್ರಕರಣದಲ್ಲಿ ದಲಿತರಿಗೆ ನಿವೇಶನ ನೀಡಲಿಲ್ಲ. ನಿಜವಾದ ಸೊಸೈಟಿಗೆ ಗುಂಡಿ ತೋಡಿ, ವಿಜಯಪುರದ ಯಾವುದೊ ಸೊಸೈಟಿಗೆ ಜಮೀನು ನೀಡಿದರು. ನಕಲಿ ಸೊಸೈಟಿ ಹೆಸರಿನಲ್ಲಿ ತಾವೂ ಜಮೀನು ಕಬಳಿಸಿದರು. ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ತಮ್ಮ ಷಡ್ಡಖನಿಗೆ ಅನುಕೂಲ ಮಾಡಿಕೊಡಲು ಕುಣಿಗಲ್ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲು ಹೊರಟಿದ್ದಾರೆ. ಬಿಟ್ಟರೆ, ಮಂಗಳೂರನ್ನೂ ಬೆಂಗಳೂರಿಗೆ ಸೇರಿಸಿಬಿಡುತ್ತಾರೆ’ ಎಂದರು.
‘ಜನರು ನನಗೆ ಐದು ವರ್ಷ ಅಧಿಕಾರ ನೀಡಲಿ, ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಇವರ ಎಲ್ಲ ಕರ್ಮಗಳನ್ನು ಹೊರಗೆಡಹುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.