ADVERTISEMENT

ಭಾಷೆ ಹೆತ್ತ ತಾಯಿಗೆ ಸಮಾನ: ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 17:14 IST
Last Updated 7 ನವೆಂಬರ್ 2020, 17:14 IST
ನಗರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ (ಎಡದಿಂದ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ, ಸಂಸದ ತೇಜಸ್ವಿ ಸೂರ್ಯ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇದ್ದರು -  –ಪ್ರಜಾವಾಣಿ ಚಿತ್ರ

ಬೆಂಗಳೂರು: ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಕೊಡುಗೆ ನೀಡಿದ 65 ಸಾಧಕರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ‘ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಎಲ್ಲರೂ ನಾಡು, ನುಡಿಯ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಈ ಬಾರಿ ಅತ್ಯಂತ ಪಾರದರ್ಶಕವಾಗಿ, ಎಲೆಮರೆ ಕಾಯಿಯಂತಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಕೆಲಸ ಮಾಡಿದವರನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

‘ನಮ್ಮ ಭಾಷೆ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಎನ್ನುವುದು ಅಸ್ಮಿತೆಯ ಭಾಗ. ಭಾಷೆ ಮತ್ತು ಜನ್ಮಭೂಮಿ ಹೆತ್ತ ತಾಯಿಗೆ ಸಮಾನ. ಹೆತ್ತ ತಾಯಿಗೆ ಸಲ್ಲುವಂಥ ಎಲ್ಲ ಗೌರವ, ಆದರಗಳು ಭಾಷೆ ಮತ್ತು ಹುಟ್ಟಿದ ನಾಡಿಗೆ ಸಲ್ಲಬೇಕು’ ಎಂದರು.

ADVERTISEMENT

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆಯ ರೈತ ಮಹಿಳೆ ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ‘ವ್ಯವಸಾಯ ಎಂದರೆ ನೀ ಸಾಯಾ, ನಿಮ್ಮಪ್ಪ ಸಾಯಾ ಮನೆ ಮಂದಿಯೆಲ್ಲಾ ಸಾಯಾ ಎಂಬುದು ಸರಿಯಲ್ಲ. ಸಾಯಾವನ್ನು ಸಹಾಯ ಮಾಡಬೇಕು’ ಎಂದರು.

‘ಬರಗಾಲ ಪೀಡಿತ ತಮ್ಮ ಜಿಲ್ಲೆಯಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲೂ ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ
ಯವರಲ್ಲ. ಸಂಕಷ್ಟದಲ್ಲೂ ಬದುಕುವ ಕಲೆ
ರೂಢಿಸಿಕೊಂಡಿದ್ದಾರೆ.ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು’ ಎಂದರು.

ಮುಖ್ಯಮಂತ್ರಿ ನಿಧಿಗೆ ನಗದು ವಾಪಸು

ಪ್ರಶಸ್ತಿ ಪುರಸ್ಕೃತರ ಪೈಕಿ ಗಿರಿಜಾ ನಾರಾಯಣ (ಸಂಗೀತ) ಮತ್ತು ಅಮರನಾರಾಯಣ (ಪರಿಸರ) ಅವರು ಪ್ರಶಸ್ತಿ ಮೊತ್ತ ₹ 1 ಲಕ್ಷವನ್ನು ಮುಖ್ಯಮಂತ್ರಿ ನಿಧಿಗೆ ವಾಪಸು ನೀಡಿದ್ದಾರೆ. ಸಿದ್ರಾಮಪ್ಪ ಬಸವಂತರಾವ್‌ ಪಾಟೀಲ (ಕೃಷಿ) ಅವರು ₹ 1 ಲಕ್ಷದಲ್ಲಿ ₹ 50 ಸಾವಿರವನ್ನು ಮುಖ್ಯಮಂತ್ರಿ ನಿಧಿಗೆ ಉಳಿದ ₹ 50 ಸಾವಿರನ್ನು ಹುಟ್ಟೂರಿನ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿದ್ದಾರೆ. ಟಿ. ವೆಂಕಟೇಶ್‌ (ಮಾಧ್ಯಮ) ಅವರು ₹ 1 ಲಕ್ಷವನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.