ADVERTISEMENT

ಲಾನಿನೊ ಪ್ರಭಾವ: ಥರಗುಟ್ಟುವ ಚಳಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 20:52 IST
Last Updated 11 ನವೆಂಬರ್ 2020, 20:52 IST
ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳುವ ಪ್ರಯತ್ನ–ಸಾಂದರ್ಭಿಕ ಚಿತ್ರ
ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳುವ ಪ್ರಯತ್ನ–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಲಾನಿನೊ’ ಪ್ರಭಾವದಿಂದ ಬೀದರ್‌ನಲ್ಲಿ ಎರಡು ದಿನಗಳಿಂದ 7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದುಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಫೆಸಿಪಿಕ್ ಸಾಗರದ ‘ನಿನೊ-3’ ಭಾಗದಲ್ಲಿ 0.5 ಡಿಗ್ರಿ ಸೆಲ್ಸಿಯಸ್‍ಗಿಂತ ನೀರಿನ ಉಷ್ಣಾಂಶ ಪ್ರಮಾಣ ಕಡಿಮೆಯಾದಾಗ ಹವಾಮಾನದಲ್ಲಿ ಬದಲಾವಣೆಗಳು ಕಾಣಬಹುದು. ಈ ಪ್ರಕ್ರಿಯೆಯನ್ನು ‘ಲಾನಿನೊ’ ಎನ್ನಲಾಗುತ್ತದೆ.

‘ಫೆಸಿಪಿಕ್ ಸಾಗರದಲ್ಲಿ ನೀರಿನ ಮೇಲ್ಮೈ ತಾಪಮಾನ ಕಡಿಮೆಯಾಗಿರುವ ಪರಿಣಾಮ ರಾಜ್ಯದಲ್ಲಿ ಹಿಂಗಾರು ಕ್ಷೀಣಿಸಿದೆ. ಇದರಿಂದ ರಾಜ್ಯದಲ್ಲಿ ಚಳಿಯ ಪ್ರಮಾಣವೂ ಏರತೊಡಗಿದೆ. ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಅತಿ ಕಡಿಮೆ ತಾಪಮಾನ ದಾಖಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಉತ್ತರದಿಂದ ಬೀಸುವ ಗಾಳಿಯಿಂದ ಕಡಿಮೆ ತಾಪಮಾನ ಕಂಡುಬರುತ್ತದೆ. ಹಾಗಾಗಿ, ಎರಡು ದಿನಗಳಿಂದ ಬೀದರ್ ಹಾಗೂ ಉತ್ತರ ಒಳನಾಡಿನ ಕೆಲವು ಕೆಲವೆಡೆ ಕಡಿಮೆ ತಾಪಮಾನ ಕಂಡುಬಂದಿದೆ’ ಎಂದು ಅವರು ತಿಳಿಸಿದರು.

ಸಂಜೆಯಿಂದಲೇ ಚಳಿ: ಬೆಂಗಳೂರಿನಲ್ಲಿಬುಧವಾರ 16 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 13, ಕಲಬುರ್ಗಿಯಲ್ಲಿ 16.2 ಡಿಗ್ರಿ ಕನಿಷ್ಠ ತಾಪಮಾನ ಇತ್ತು.

ದೀಪಾವಳಿಯವರೆಗೂ ಚಳಿ

ಬೀದರ್‌: ಬೀದರ್‌ನಲ್ಲಿ ಬುಧವಾರವೂ 7.8 ಡಿಗ್ರಿ ಸೆಲ್ಸಿಯಸ್ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಕಳೆದ ವರ್ಷ ನವೆಂಬರ್‌ ಮೊದಲ ವಾರದಲ್ಲೇ ಮೈಕೊರೆಯುವ ಚಳಿ ಆರಂಭವಾಗಿತ್ತು. ಈ ಬಾರಿ ಎರಡನೇ ವಾರದಿಂದ ಚಳಿ ಶುರುವಾಗಿದೆ. 1901ರ ಜನವರಿ 5ರಂದು ಬೀದರ್ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. 2015ರ ಜನವರಿ 10 ರಂದು 5.8 ಡಿಗ್ರಿ ಸೆಲ್ಸಿಯಸ್, 2018ರ ಡಿಸೆಂಬರ್ 31 ರಂದು ತಾಲ್ಲೂಕಿನ ಮನ್ನಳ್ಳಿಯಲ್ಲಿ 4 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

‘ದೀಪಾವಳಿ ಮುಗಿಯುವವರೆಗೂ ಕನಿಷ್ಠ ಉಷ್ಣಾಂಶ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಲಿದೆ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ವಿಜ್ಞಾನಿ ಗಂಗಾಧರ ಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.