
ಬೆಂಗಳೂರು: ‘ಇಲಾಖೆಯ ಅಧಿಕಾರಿ, ಸಿಬ್ಬಂದಿ ‘ಇ-ಆಫೀಸ್’ ಮೂಲಕವೇ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಮುಂದಿನ ಮೂರು ತಿಂಗಳಲ್ಲಿ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು (ವಿಎಒ) ಮತ್ತು ಕಂದಾಯ ನಿರೀಕ್ಷಕರಿಗೆ (ಆರ್‌ಐ) ಲ್ಯಾಪ್‌ಟಾಪ್ ನೀಡಲಾಗುವುದು. ಆ ಮೂಲಕ, ಎಲ್ಲ ಕೆಲಸಗಳನ್ನು ಶೇ 100ರಷ್ಟು ಆನ್‌ಲೈನ್ ವ್ಯಾಪ್ತಿಗೆ ತರಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಗದ ವ್ಯವಹಾರಕ್ಕೆ ಇತಿಶ್ರೀ ಹಾಡಬೇಕೆಂಬ ಏಕೈಕ ಕಾರಣಕ್ಕೆ ಸಚಿವ ಸಂಪುಟದ ಅನುಮತಿಯೊಂದಿಗೆ ಈಗಾಗಲೇ 5 ಸಾವಿರ ವಿಎಒಗಳಿಗೆ ಲ್ಯಾಪ್‌ಟಾಪ್ ನೀಡಲಾಗಿದೆ’ ಎಂದರು.
‘ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಎರಡೂವರೆ ವರ್ಷಗಳ ಅವಧಿಯಲ್ಲಿ ಪೋಡಿ ದುರಸ್ತಿ, ಪೌತಿಖಾತೆ, ಭೂ ಸುರಕ್ಷಾ ಅಭಿಯಾನ ಮುಂತಾದ ಸೇವೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದೇವೆ’ ಎಂದರು.
‘2018ರಿಂದ 2023ರ ನಡುವೆ ಕೇವಲ 8,500 ಪ್ರಕರಣಗಳಲ್ಲಿ ಮಾತ್ರ ಪೋಡಿ ಮಾಡಲಾಗಿತ್ತು. ಇದೇ ವರ್ಷದ ಜನವರಿ ತಿಂಗಳಲ್ಲಿ ‘ನನ್ನ ಭೂಮಿ’ ಅಭಿಯಾನ ಆರಂಭಿಸಿ ಒಂದೇ ವರ್ಷದಲ್ಲಿ 1,49,600 ಜಮೀನನ್ನು ದರ್ಖಾಸ್ತು ಪೋಡಿ ಅಳತೆಗೆ ತೆಗೆದುಕೊಂಡಿದ್ದೇವೆ. ಹಾಸನ ಜಿಲ್ಲೆಯಲ್ಲಿ 17 ಸಾವಿರ ಪ್ರಕರಣಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಇದನ್ನು ಸಾಂಕೇತಿಕವಾಗಿ ಜನರಿಗೆ ಸಮರ್ಪಣೆ ಮಾಡುವ ಸಲುವಾಗಿ ಡಿ. 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ‘ಸಮರ್ಪಣಾ ದಿನ’ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಸರ್ಕಾರಿ ಜಮೀನು ಮಂಜೂರುದಾರರಿಗೆ ದರ್ಖಾಸ್ತು ಪೋಡಿ ಅಭಿಯಾನದ ಅಡಿಯಲ್ಲಿ ಜಮೀನು ಸರ್ವೇ ಮಾಡಿ ಪೋಡಿ ಮಾಡಿಕೊಡಲಾಗುತ್ತಿದ್ದರೆ, ಖಾಸಗಿ ಜಮೀನು ಮಾಲೀಕರಿಗೂ ಸಹ ನಾವೇ ಸ್ವಯಂ ಪ್ರೇರಿತರಾಗಿ ‘ಪೋಡಿ ಮುಕ್ತ ಗ್ರಾಮ’ ಅಭಿಯಾನದ ಅಡಿ ಪೋಡಿ ಮಾಡಿಕೊಡುತ್ತಿದ್ದೇವೆ. ಈ ಹಿಂದೆ ತಿಂಗಳಿಗೆ ಸರಾಸರಿ 90 ಸಾವಿರ ಸರ್ವೇ ಮಾಡಲಾಗುತ್ತಿತ್ತು. ಈಗ ಸರಾಸರಿ 1.34 ಲಕ್ಷ ಸರ್ವೇ ಮಾಡಿಕೊಡುತ್ತಿದ್ದೇವೆ. ಸರ್ವೇ ಕಾರ್ಯಕ್ಕೆ ಸಹಕಾರಿಯಾಗಲು ಈಗಾಗಲೇ 600 ರೋವರ್ ಖರೀದಿ ಮಾಡಲಾಗಿದೆ. ಇನ್ನೂ 1000 ರೋವರ್‌ಗಳನ್ನು ಖರೀದಿಸಲಾಗುವುದು’ ಎಂದರು.
ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ
‘ನಾನು ಕಂದಾಯ ಸಚಿವನಾಗಿ ಬಂದಾಗ ತಹಶೀಲ್ದಾರ್ ನ್ಯಾಯಾಲಯದಲ್ಲಿ 10774 ಪ್ರಕರಣಗಳು ಅವಧಿ ಮೀರಿಯೂ ಇತ್ಯರ್ಥವಾಗದೆ ಬಾಕಿ ಇದ್ದವು. ಆ ಸಂಖ್ಯೆಯನ್ನು 526ಕ್ಕೆ ಇಳಿಸಲಾಗಿದೆ. ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲಿ 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ 59339 ಪ್ರಕರಣಗಳು ಬಾಕಿ ಇದ್ದವು. ವಿಶೇಷ ಎಸಿಗಳನ್ನು ನೇಮಿಸಿ ಈ ಸಂಖ್ಯೆಯನ್ನು 9954ಕ್ಕೆ ಇಳಿಸಲಾಗಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪೌತಿ ಖಾತೆ ಅಭಿಯಾನ
‘ರಾಜ್ಯದಲ್ಲಿ ಸುಮಾರು 40 ಲಕ್ಷ ಜಮೀನುಗಳಿಗೆ ಸಂಬಂಧಿಸಿದಂತೆ ಪೌತಿ ಖಾತೆ ಅಭಿಯಾನ ಆರಂಭಿಸಿದ್ದು ಈವರೆಗೆ 3.20 ಲಕ್ಷ ಜಮೀನು ಪೌತಿ ಖಾತೆ ಯಶಸ್ವಿಯಾಗಿದೆ. ಪ್ರತಿಯೊಬ್ಬ ವಿಎಒ ತಿಂಗಳಿಗೆ ಕಡ್ಡಾಯ 100 ಪೌತಿ ಖಾತೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಪ್ರಗತಿ ಸಾಧಿಸುವರಿಗೆ ಪ್ರೋತ್ಸಾಹ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಚಿವರು ತಿಳಿಸಿದರು.
ಭೂ ಸುರಕ್ಷಾ ಅಭಿಯಾನ ‘ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 53 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 40 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು ಪ್ರತಿ ದಿನ ಸುಮಾರು 17500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಫೆಬ್ರುವರಿ ಕೊನೆಯ ಒಳಗೆ ಇದನ್ನು ಮುಗಿಸಬೇಕು ಎಂದು ಗಡುವು ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.