ADVERTISEMENT

ಸರ್ಕಾರ ಉಳಿಸಿಕೊಳ್ಳಲು ಕೊನೆ ಯತ್ನ

ಕಾಂಗ್ರೆಸ್ ಮುಖಂಡರ ಜತೆ ಸಿ.ಎಂ ಚರ್ಚೆ: ರಾಜೀನಾಮೆ ನೀಡಿದ ಶಾಸಕರ ಅನರ್ಹತೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:00 IST
Last Updated 17 ಜುಲೈ 2019, 20:00 IST
   

ಬೆಂಗಳೂರು: ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ತೀರ್ಪು ಸುಪ್ರೀಂಕೋರ್ಟ್‌ನಿಂದ ಹೊರ ಬೀಳುತ್ತಿದ್ದಂತೆ ಮೈತ್ರಿ ಪಕ್ಷಗಳ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ‘ಗುರುವಾರಕ್ಕೆ ಏನು ಮಾಡುವುದು’ ಇದೊಂದೇ ಚರ್ಚೆ ಎರಡೂ ಪಕ್ಷಗಳ ನಾಯಕರ ಮನದಲ್ಲಿ ಹರಿದಾಡಿತು.

ಬೆಳಿಗ್ಗೆಯಿಂದ ರಾತ್ರಿಯವರೆಗೂ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಯಿತು. ತೀರ್ಪು ಹೊರಬೀಳುವ ವೇಳೆಗೆ ದೇಗುಲದಿಂದ ಹೊರಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜತೆ ಚರ್ಚಿಸಿದರು. ನಂತರ ಕಾಂಗ್ರೆಸ್ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ತಂತ್ರ ಹೆಣೆಯಲಾಯಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖಂಡ ಸಿದ್ದರಾಮಯ್ಯ ಇದ್ದರು.

ಚರ್ಚೆಯ ನಂತರ ವಿಧಾನ ಸಭಾಧ್ಯಕ್ಷರನ್ನು ಭೇಟಿಮಾಡಿದ ಕಾಂಗ್ರೆಸ್ ಮುಖಂಡರು, ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಕೆಲವು ದಾಖಲೆಗಳನ್ನು ಸಲ್ಲಿಸಿದರು. ಪಕ್ಷದಲ್ಲೇ ಇದ್ದುಕೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ADVERTISEMENT

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರು ಪಕ್ಷದಲ್ಲೇ ಉಳಿಯುವುದಾಗಿ ಹೇಳಿರುವುದು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹದ ಗೆರೆ ಮೂಡಿಸಿದೆ. ಮತ್ತೊಬ್ಬ ಶಾಸಕ ರೋಷನ್‌ ಬೇಗ್ ಅವರ ಮನವೊಲಿಕೆಯೂ ಮುಂದುವರಿದಿದ್ದು, ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆದು, ಮೈತ್ರಿ ಸರ್ಕಾರ ಬೆಂಬಲಿಸುವಂತೆ ಮಾಡಲಾಗುತ್ತಿದೆ.

ರಾತ್ರಿ ಸಭೆ: ವಿಧಾನಸೌಧದ ಸುತ್ತಮುತ್ತ ನಡೆಯುತ್ತಿದ್ದ ರಾಜಕೀಯ ಚಟುವಟಿಕೆಗಳು ಸಂಜೆ ವೇಳೆಗೆ ರೆಸಾರ್ಟ್‌ಗೆ ಸ್ಥಳಾಂತರಗೊಂಡವು. ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ಜತೆ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು. ಇಡೀ ದಿನದ ರಾಜಕೀಯ ಬೆಳವಣಿಗೆಗಳು, ಸುಪ್ರೀಂಕೋರ್ಟ್ ತೀರ್ಪಿನಿಂದ ಆಗುವ ಪರಿಣಾಮಗಳು, ಸರ್ಕಾರ ಉಳಿಸಿಕೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಅತೃಪ್ತರ ಬಿಗಿ ಪಟ್ಟು: ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಬಿಗಿಪಟ್ಟು ಸಡಿಲಿಸಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ವಾಪಸ್ ಬಂದು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಮಲಿಂಗಾರೆಡ್ಡಿ ಪಕ್ಷದಲ್ಲೇ ಉಳಿಯುವುದಾಗಿ ಹೇಳಿರುವುದರಿಂದ ಅತೃಪ್ತರ ಲೆಕ್ಕಾಚಾರವೂ ಬದಲಾಗಿದ್ದು, ಅವರಲ್ಲಿ ಕೆಲವರು ಬೇರೆಯದೇ ಚಿಂತನೆ ನಡೆಸಿದ್ದಾರೆ. ಬೆಂಗಳೂರಿನ ಕೆಲ ಶಾಸಕರು ವಾಪಸ್ ಬರುವ ಸಾಧ್ಯತೆಗಳಿದ್ದು, ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.ಕಾನೂನಿನ ಅಸ್ತ್ರ ಬಳಸಿ ಅತೃಪ್ತರನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವೂ ಸಾಗಿದೆ ಎನ್ನಲಾಗಿದೆ.

ಶಾಸಕರ ಒಗ್ಗಟ್ಟು ಕಾಪಾಡಿಕೊಳ್ಳಲು ಮೈತ್ರಿ ಪಕ್ಷಗಳ ನಾಯಕರ ಕಸರತ್ತಿನ ನಡುವೆ ಕಾಂಗ್ರೆಸ್‌ನ ಇಬ್ಬರು ಶಾಸಕರು ಅನಾರೋಗ್ಯದ ಕಾರಣ ಹೇಳಿ ರೆಸಾರ್ಟ್‌ನಿಂದ ಹೊರಹೋಗುವ ಪ್ರಯತ್ನ ನಡೆಸಿದ್ದಾರೆ. ಆದರೆ, ಹೊರಗೆ ಹೋಗದಂತೆ ಮನವೊಲಿಸಲಾಗಿದೆ.

ಮೋಸ ಹೋಗಬೇಡಿ: ಡಿಕೆಶಿ

‘ಬೇರೆಯವರ ನಂಬಿ ಮೋಸ ಹೋಗಬೇಡಿ. ನಿಮ್ಮ ಮೇಲೆ ಮಂಗನ ಟೋಪಿ ಹಾಕುತ್ತಾರೆ. ಅನರ್ಹತೆಗೆ ಬಲಿಯಾಗಬೇಡಿ. ನಿಮ್ಮ ಕುಟುಂಬ, ವೋಟುಕೊಟ್ಟ ಕ್ಷೇತ್ರದ ಮತದಾರರ ಮುಖನೋಡಿ ವಾಸಪ್ ಬನ್ನಿ’ ಎಂದು ಸಚಿವ ಡಿ.ಕೆ.ಶಿವಕುಮಾರ್, ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ.

**

‘ಸುಪ್ರೀಂ’ ಆದೇಶ ಪ್ರಜಾಪ್ರಭುತ್ವದ ಗೆಲುವೂ ಹೌದು. ಶಾಸಕರಿಗೆ ವಿಪ್‌ ಅನ್ವಯವಾಗುವುದಿಲ್ಲ. ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು
- ಬಿ.ಎಸ್‌.ಯಡಿಯೂರಪ್ಪ, ಅಧ್ಯಕ್ಷರು, ಬಿಜೆಪಿ ರಾಜ್ಯ ಘಟಕ

**
ಇಂತಹ ತೀರ್ಪು ನಿರೀಕ್ಷಿಸಿರಲಿಲ್ಲ. ಇದು ಚರ್ಚೆಗೊಳಪಡಬೇಕು.
- ವೇಣುಗೋಪಾಲ್‌, ಕಾಂಗ್ರೆಸ್ ಉಸ್ತುವಾರಿ

**
ಶಾಸಕಾಂಗದ ಕೆಲಸದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶ ಮಾಡಿದೆ. ಇದರ ಬಗ್ಗೆ ಪಕ್ಷ ಭೇದ ಮರೆತು ಚರ್ಚೆ ಮಾಡಬೇಕಾಗಿದೆ.
- ದಿನೇಶ್‌ ಗುಂಡೂರಾವ್‌ಕೆಪಿಸಿಸಿ ಅಧ್ಯಕ್ಷ

**
ಸುಪ್ರೀಂಕೋರ್ಟ್‌ ತೀರ್ಪು ಸರಿಯಾಗಿದೆ. ಸಭಾಧ್ಯಕ್ಷರ ಅಧಿಕಾರ, ಜವಾಬ್ದಾರಿ ಎತ್ತಿ ಹಿಡಿದಿದೆ.
- ಡಿ.ಕೆ.ಶಿವಕುಮಾರ್‌,, ಜಲಸಂಪನ್ಮೂಲ ಸಚಿವ

**
ರಾಜ್ಯ ರಾಜಕೀಯ ಗೊಂದಲಗಳಿಗೆ ಸುಪ್ರೀಂಕೋರ್ಟ್‌ ತೀರ್ಪಿನಿಂದಾಗಿ ಸ್ಪಷ್ಟವಾದ ಪರಿಹಾರ ದೊರೆತಂತಾಗಿದೆ. ಸಭಾಧ್ಯಕ್ಷರು ವಿಳಂಬ ಮಾಡದೇ; ನಿರ್ಧಾರ ತೆಗೆದುಕೊಳ್ಳಬೇಕು
- ಕೆ.ಜಿ.ಬೋಪಯ್ಯ, ಮಾಜಿ ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.