ADVERTISEMENT

ವಂಚನೆ ಆರೋಪದಡಿ ರಜನಿಕಾಂತ್ ಪತ್ನಿಗೆ ನೋಟಿಸ್‌: ಸಮಯ ನೀಡುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:17 IST
Last Updated 11 ಮೇ 2019, 20:17 IST
ಲತಾ ರಜನಿಕಾಂತ್
ಲತಾ ರಜನಿಕಾಂತ್   

ಬೆಂಗಳೂರು: ನಗರದ ‘ಆ್ಯಡ್ ಬ್ಯೂರೊ ಅಡ್ವಟೈಸಿಂಗ್’ ಕಂಪನಿಗೆ ₹ 6.20 ಕೋಟಿ ವಂಚಿಸಿದ ಆರೋಪದಡಿ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆನಟ ರಜನಿಕಾಂತ್ ಅವರ ಪತ್ನಿ ಲತಾ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

’ರಜನಿಕಾಂತ್ ಅಭಿನಯದ ’ಕೊಚ್ಚಾಡಿಯನ್’ ಚಿತ್ರದ ಜಾಹೀರಾತು ಪ್ರಕಟಿಸಿದ್ದ ಕಂಪನಿಯ ಮಾಲೀಕರು ನೀಡಿದ್ದ ದೂರಿನಡಿ ನಿಮ್ಮ (ಲತಾ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚೆನ್ನೈನಲ್ಲಿರುವ ಮನೆಯಲ್ಲೇ2018ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ನಿಮ್ಮ ಹೇಳಿಕೆ ಪಡೆಯಲಾಗಿದೆ. ಮತ್ತೊಮ್ಮೆ ನಿಮ್ಮ ಹೇಳಿಕೆ ಅಗತ್ಯವಿರುವುದರಿಂದ ಮೇ 6ರಂದು ವಿಚಾರಣೆಗೆ ಬನ್ನಿ’ ಎಂದು ಪೊಲೀಸರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ನೋಟಿಸ್‌ಗೆ ಉತ್ತರ ನೀಡಿರುವ ಲತಾ, ‘ನಾನು ಸದ್ಯ ಪ್ರವಾಸದಲ್ಲಿದ್ದೇನೆ. ದಯವಿಟ್ಟು ವಿಚಾರಣೆ ದಿನವನ್ನು ಮುಂದೂಡಿ. ಮೇ 20ರ ನಂತರ ವಿಚಾರಣೆಗೆ ಬರುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಕರಣದ ವಿವರ: 2014ರಲ್ಲಿ ನಿರ್ಮಿಸಿದ್ದ ‘ಕೊಚ್ಚಾಡಿಯನ್’ ಚಿತ್ರದ ಜಾಹೀರಾತುಗಳನ್ನು ‘ಆ್ಯಡ್ ಬ್ಯೂರೊ ಅಡ್ವಟೈಸಿಂಗ್’ ಕಂಪನಿ ನೀಡಿತ್ತು. ಒಪ್ಪಂದದಂತೆ ಲತಾ ಅವರು ಸಂಭಾವನೆ ನೀಡಿರಲಿಲ್ಲ. ಆ ಸಂಬಂಧ ಕಂಪನಿ ಮಾಲೀಕ ಅಬಿರ್ ಚಂದ್‌, ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ರದ್ದು ಮಾಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್, ‘ದೂರು ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು. ಬಳಿಕವೇ ಹಲಸೂರು ಗೇಟ್‌ ಠಾಣೆಯಲ್ಲಿ ಲತಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.