
ಬೆಂಗಳೂರು: ‘ರಾಜ್ಯದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ಧವಾಗಿದ್ದು, ಅದಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ. ಕ್ರೈಸ್ತ ಸಮುದಾಯದ ಜನರ ಅಭಿವೃದ್ಧಿಗೆ ಸ್ಥಾಪಿಸಲಾಗಿರುವ ನಿಗಮದ ಎಲ್ಲ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಕ್ರಮ ವಹಿಸಲಾಗುತ್ತದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಕೆಎಂಡಿಸಿ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ’ದ ಹೊಸ ಯೋಜನೆಗಳಿಗೆ ಮತ್ತು ವೆಬ್ ಪೋರ್ಟಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಈ ನಿಗಮ ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮಕ್ಕೆ ₹250 ಕೋಟಿ ಅನುದಾನ ಒದಗಿಸಿದ್ದು, ಅದರಲ್ಲಿ ಪ್ರತಿ ರೂಪಾಯಿಯೂ ಸದುಪಯೋಗ ಆಗಬೇಕು’ ಎಂದು ಅವರು ಹೇಳಿದರು.
ನಿಗಮದ ಅಧ್ಯಕ್ಷ ಪ್ರೊ.ಎಸ್.ಜಾಫೆಟ್, ‘ನಿಗಮವು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಬಗ್ಗೆ ಪ್ರಚಾರ ಮಾಡಿ, ಹೆಚ್ಚು ಜನರು ಪ್ರಯೋಜನ ಪಡೆಯುವಂತೆ ಮಾಡಲಾಗುತ್ತದೆ. ಸರ್ಕಾರವೂ ಅಗತ್ಯ ಸಹಕಾರ ಒದಗಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.