ADVERTISEMENT

ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ ಇಲ್ಲ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಗಲಭೆಕೋರರ ಆಸ್ತಿಯನ್ನು ಜಪ್ತಿ ಮಾಡುವ ಕಾಯ್ದೆ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 19:45 IST
Last Updated 27 ಡಿಸೆಂಬರ್ 2019, 19:45 IST
ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ   

ಉಡುಪಿ: ಸಾರ್ವಜನಿಕರ ಆಸ್ತಿ ನಾಶಮಾಡುವಗಲಭೆಕೋರರ ಆಸ್ತಿ ಜಪ್ತಿಮಾಡುವ ಉತ್ತರ ಪ್ರದೇಶ ಮಾದರಿ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ಚಿಂತನೆ ಸದ್ಯಕ್ಕೆ ಇಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದರೆ ಕಾನೂನಿನಡಿ ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಸಿವಿಲ್ ನ್ಯಾಯಾಲಯಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್ ಕೋರ್ಟ್‌ನಲ್ಲಿ ಲೆಕ್ಕವಿಲ್ಲದಷ್ಟು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಧಿಕಾರ ವಿಕೇಂದ್ರೀಕರಣದ ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಭಾರ ಕಡಿಮೆಗೊಳಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಅಧಿಕಾರವನ್ನು ಎಸಿ ಹಾಗೂ ತಹಶೀಲ್ದಾರ್‌ಗಳಿಗೆ ನೀಡಲಾಗುವುದು ಎಂದರು.

ADVERTISEMENT

ರಾಜ್ಯದಲ್ಲಿ ಪಬ್ಲಿಕ್‌ ಪ್ಯಾಸಿಕ್ಯೂಟರ್‌ಗಳ ಕೊರತೆಯಿದ್ದು, ಪಿಪಿಗಳ ನೇಮಕ ಮಾಡಿಕೊಳ್ಳಲಾಗುವುದು. ಸಿವಿಲ್‌ ನ್ಯಾಯಾಲದಲ್ಲಿರುವ ಪ್ರಕರಣಗಳ ವಿಚಾರಣೆ ವೇಗವಾಗಿ ನಡೆಯಬೇಕು ಎಂಬ ಉದ್ದೇಶದಿಂದ ನ್ಯಾಯಾಂಗಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.