ಪುತ್ತೂರು (ದಕ್ಷಿಣ ಕನ್ನಡ): ತಪ್ಪು ಮಾಹಿತಿ ಪ್ರಚಾರ ತಡೆಯಲು ಮತ್ತು ಕೋಮು ಸೌಹಾರ್ದ ರಕ್ಷಣೆಗೆ ಹೊಸ ಕಾನೂನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.
ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಇಲ್ಲಿನ ಕೊಂಬೆಟ್ಟು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಅಶೋಕ ಜನ-ಮನ’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘ಕಾನೂನು ಸಚಿವ ಎಚ್.ಕೆ. ಪಾಟೀಲ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಕಾಯ್ದೆಯ ರೂಪುರೇಷೆ ಸಿದ್ಧಪಡಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಚಟುವಟಿಕೆ ಮಿತಿಮೀರಿತ್ತು. ಅದನ್ನು ತಡೆಯಲು ದಕ್ಷ ಅಧಿಕಾರಿಗಳನ್ನು ನಿಯೋಜಿಸಲಾಯಿತು. ನಂತರ ಪರಿಸ್ಥಿತಿ ಹದ್ದುಬಸ್ತಿನಲ್ಲಿದೆ’ ಎಂದು ಅವರು ಹೇಳಿದರು.
‘ಸಾರ್ವಜನಿಕ ಸ್ಥಳದಲ್ಲಿ ಚಟುವಟಿಕೆಗೆ ಯಾವುದೇ ಸಂಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ 2013ರಲ್ಲಿ ನಿಷೇಧ ಹೇರಲಾಗಿತ್ತು. ಅದನ್ನು ಈಗ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದರೆ ಆರ್‌ಎಸ್‌ಎಸ್ ಮಟ್ಟ ಹಾಕಲು ಹೊರಟಿರುವುದಾಗಿ ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಇಂಥ ಸೂಕ್ಷ್ಮಗಳನ್ನು ಜನರು ಗಮನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.