ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆಪತ್ರಿಕೆ ಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದ ಆರೋಪದ ಅಡಿ ಉಪ ಪ್ರಾಂಶುಪಾಲ ಸೇರಿದಂತೆ ಮೂವರು ಆರೋಪಿಗಳನ್ನು ಸೈಬರ್ ಅಪರಾಧ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಸವಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ಅವರ ಕಾರು ಚಾಲಕ ವಿ. ಜಗದೀಶ್ ಹಾಗೂ ಬಂಗಾರಪೇಟೆಯ ಕಾನೂನು ಕಾಲೇಜಿನ ವಿದ್ಯಾರ್ಥಿ ವರುಣ್ ಕುಮಾರ್ ಬಂಧಿತರು.
ಕಾನೂನು ವಿಶ್ವವಿದ್ಯಾಲಯದ ಪರೀಕ್ಷಾ ಜಾಗೃತ ದಳ–2ರ ಮುಖ್ಯಸ್ಥ ಕೆ.ಎನ್.ವಿಶ್ವನಾಥ್ ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತಾಂತ್ರಿಕ ಪುರಾವೆ ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಮೂವರು ಆರೋಪಿಗಳನ್ನು ಕೋಲಾರದ ಮನೆಯಲ್ಲಿ ವಶಕ್ಕೆ ಪಡೆದು ಬಂಧಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇನ್ನೂ ಕೆಲವರ ಕೈವಾಡವಿರುವ ಶಂಕೆಯಿದ್ದು, ಹೆಚ್ಚಿನ ವಿಚಾರಣೆಗೆ ಮೂವರನ್ನೂ 10 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳ ಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಕಾನೂನು ವಿಶ್ವವಿದ್ಯಾಲಯದ ಅಧೀನದ ಕಾನೂನು ಕಾಲೇಜುಗಳಲ್ಲಿ ಜನವರಿ 20ರಿಂದ ವಿವಿಧ ವಿಷಯಗಳ ಪರೀಕ್ಷೆಗಳು ಆರಂಭವಾಗಿದ್ದು, ಫೆಬ್ರುವರಿ 20ರವರೆಗೆ ನಡೆಯಲಿವೆ. ಕೆ.ಎನ್.ವಿಶ್ವನಾಥ್ ಅವರನ್ನು ವಿವಿಧ ಕಾನೂನು ಕಾಲೇಜುಗಳಲ್ಲಿ ಪರೀಕ್ಷಾ ಪ್ರಕ್ರಿಯೆಯ ತಪಾಸಣೆ ನಡೆಸುವ ಜಾಗೃತ ದಳ–2ರ ಮುಖ್ಯಸ್ಥರಾಗಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರ ರಜಪೂತ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಜ.23ರಂದು ಸಹಾಯಕ ಪರಿವೀಕ್ಷಕ ರಾಜೂರ್ ಅವರು ವಿಶ್ವನಾಥ್ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕೆಲವು ಪ್ರಶ್ನೆಗಳನ್ನು ಕಳುಹಿಸಿದ್ದರು. ಅಂದು ನಡೆಯುತ್ತಿದ್ದ ಕಾಂಟ್ರಾಕ್ಟ್ ಲಾ–1 ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆ ಗೆ ಹೋಲಿಕೆ ಮಾಡಿದಾಗ ಪ್ರಶ್ನೆಗಳು ಹೊಂದಾಣಿಕೆ ಆಗಿರುವುದು ಪತ್ತೆ ಯಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.
‘ಆರೋಪಿ, ಉಪ ಪ್ರಾಂಶುಪಾಲ ನಾಗರಾಜ್ ಅವರಿಗೆ ಅದೇ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಿ.ಜಗದೀಶ್ ಕಾರು ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ನಾಗರಾಜ್ ಅವರ ಮೊಬೈಲ್‌ನಲ್ಲಿದ್ದ ಕಾಂಟ್ರಾಕ್ಟ್ ಲಾ–1 ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಆತ ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿಕೊಂಡಿದ್ದ. ಬಳಿಕ ಪ್ರಶ್ನೆ ಗಳನ್ನು ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಪರೀಕ್ಷಾರ್ಥಿಗಳಿಗೆ ಕಳುಹಿಸಿದ್ದ. ವಿದ್ಯಾರ್ಥಿಗಳಿಂದ ಹಣ ಪಡೆದು ಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.
‘ಬಂಗಾರಪೇಟೆಯ ಕಾನೂನು ಕಾಲೇಜಿನ ವಿದ್ಯಾರ್ಥಿ ವರುಣ್ ಕುಮಾರ್ ಎಂಬಾತ ಪರೀಕ್ಷೆಯ ಹಿಂದಿನ ದಿನ ಕಾಲೇಜಿಗೆ ಬಂದು ಪ್ರಶ್ನೆಪತ್ರಿಕೆ ಗಳ ಕಟ್ಟನ್ನು ಯಾರಿಗೂ ತಿಳಿಯದಂತೆ ತೆರೆದಿದ್ದ. ಪ್ರಶ್ನೆ ಪತ್ರಿಕೆಯ ಫೋಟೊವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದು, ಕಾಲೇಜಿನ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಕಳುಹಿಸಿದ್ದ. ಅವರಿಂದ ಹಣ ಪಡೆದುಕೊಂಡಿದ್ದ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.