
ಬೆಂಗಳೂರು: ‘ವಕೀಲರು ತಮ್ಮ ಸನ್ನದು ನೋಂದಣಿಯನ್ನು ಸಮರ್ಪಿಸಿ, ವಕೀಲರ ಕಲ್ಯಾಣ ನಿಧಿ ಕಾಯ್ದೆಯ ಪ್ರಕಾರ ಆರ್ಥಿಕ ಪ್ರಯೋಜನವನ್ನು ಪಡೆದ ನಂತರ ಸನ್ನದು ಶರಣಾಗತಿಯನ್ನು ಪುನಃ ಹಿಂಪಡೆಯಲು ಬಯಸಿ ಮರುನೋಂದಣಿ ಕೋರಿದರೆ, ಅದಕ್ಕೆ ಅನುಮತಿ ನೀಡುವುದು, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಕರ್ತವ್ಯವಾಗಿರುತ್ತದೆ’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ರಾಯಚೂರಿನ ವಕೀಲ ಎಂ.ಎ.ಹಮೀದ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಅಂಗೀಕರಿಸಬೇಕು’ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸಿದೆ.
‘ಕೆಎಸ್‌ಬಿಸಿ ಕ್ರಮ ಏಕಪಕ್ಷೀಯವಾಗಿದೆ’ ಎಂಬ ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ.
ಪ್ರಕರಣವೇನು?: ‘ಅರ್ಜಿದಾರ ಹಮೀದ್ ಅವರು ಕಳೆದ 25 ವರ್ಷಗಳಿಂದ ರಾಯಚೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಕೋವಿಡ್–19ರ ಸಂದರ್ಭದಲ್ಲಿ ಕಾರಣಾಂತರಗಳಿಂದ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಬಯಸಿ ಕೆಎಸ್‌ಬಿಸಿಗೆ ತಮ್ಮ ಸನ್ನದು ಒಪ್ಪಿಸಿದ್ದರು. ಪರಿಣಾಮ ವಕೀಲರ ಕಲ್ಯಾಣ ನಿಧಿ ಕಾಯ್ದೆ–2001ರ ಅನುಸಾರ ಅವರಿಗೆ ₹1.42 ಲಕ್ಷ ಮೊತ್ತವನ್ನು ಪಾವತಿಸಲಾಗಿತ್ತು. ಈ ಮೊತ್ತ ತಮ್ಮ ನಿರೀಕ್ಷಿತ ಮೊತ್ತಕ್ಕಿಂತ ಕೇವಲವಾಗಿರುವ ಕಾರಣ ನಾನು ಪುನಃ ಸನ್ನದು ವಾಪಸು ಪಡೆದು ವೃತ್ತಿ ಮುಂದುವರಿಸುತ್ತೇನೆ’ ಎಂದು ಅರ್ಜಿದಾರರು ಕೆಎಸ್‌ಬಿಸಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಕೆಎಸ್‌ಬಿಸಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.