ADVERTISEMENT

ಬಸ್ ಓಡಿಸಲು ಎಸ್ ಸಿ, ಎಸ್ ಟಿ ನೌಕರರ ಸಂಘ ಬೆಂಬಲ: ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 7:45 IST
Last Updated 14 ಡಿಸೆಂಬರ್ 2020, 7:45 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಂಗಳೂರು: ಮುಷ್ಕರ ನಿಲ್ಲಿಸಿ ಬಸ್ ಓಡಿಸಲು ನಾಲ್ಕೂ ಸಾರಿಗೆ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘ ಬೆಂಬಲ‌ ಸೂಚಿಸಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘದ ತೀರ್ಮಾನಕ್ಕೆ ಆ ಸಮುದಾಯಗಳ ಚಾಲಕರು, ನಿರ್ವಾಹಕರು ಮತ್ತು ಮೆಕ್ಯಾನಿಕ್ ಗಳು ಬೆಂಬಲ ಸೂಚಿಸಿದ್ದಾರೆ. ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಲು ಅವರು ನಿರ್ಧರಿಸಿದ್ದಾರೆ' ಎಂದರು.

ಭಾನುವಾರ ನಡೆದ ಸಭೆಯ ತೀರ್ಮಾನಗಳನ್ನು ಲಿಖಿತವಾಗಿ ನೀಡಲು ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಅವರು ಗಂಟೆಗೊಂದು ಮಾತನಾಡುತ್ತಿದ್ದಾರೆ ಎಂದು ಮುಷ್ಕರನಿರತ ನೌಕರರ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, 'ಸಾರಿಗೆ ನೌಕರರ ಕೂಟದ ಮುಖಂಡರ ಜತೆ ಭಾನುವಾರ ರಾತ್ರಿಯೂ ಮಾತುಕತೆ ಮಾಡಿದ್ದೆವು. ನಮ್ಮನ್ನು ಹೈಜಾಕ್‌ ಮಾಡಿದ್ದಾರೆ ಎಂದು ಆಗ ಹೇಳಿದ್ದರು. ಸೋಮವಾರ ಬೆಳಿಗ್ಗೆ ಮಾಧ್ಯಮದವರ ಎದುರು ಸಾರ್ವಜನಿಕರ ಕ್ಷಮೆ ಯಾಚಿಸಿ ಮುಷ್ಕರ ವಾಪಸ್ ಪಡೆಯುವುದಾಗಿ ಒಪ್ಪಿಕೊಂಡಿದ್ದರು. ಈಗ ಬೇರೆ ಮಾತನಾಡುತ್ತಿದ್ದಾರೆ' ಎಂದರು.

ಸಂಧಾನ ಸೂತ್ರಗಳನ್ನು ಸಚಿವರೇ ನುಷ್ಕರದ ಸ್ಥಳಕ್ಕೆ ಹೋಗಿ ನೀಡಬೇಕೆಂಬ ಬೇಡಿಕೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.