ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ನಾವು ಕಾನೂನು ಹೋರಾಟ ಮಾಡುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದು, ಅದನ್ನು ಅವರು ಒಪ್ಪುವ ವಿಶ್ವಾಸವಿದೆ’ ಎಂದರು.
‘ರಾಜ್ಯಪಾಲರಿಗೆ ವಕೀಲ ಟಿ.ಜೆ. ಅಬ್ರಹಾಂ ನೀಡಿರುವ ದೂರು ಅರ್ಜಿಯಲ್ಲಿ ಸತ್ಯಾಂಶ ಇಲ್ಲವೆಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು, ಆ ನಿರ್ಣಯವನ್ನು ತಿಳಿಸಿದ ನಂತರವೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆಂದು ನನಗೆ ಅನಿಸುತ್ತಿಲ್ಲ. ಅಲ್ಲದೆ, ಸಚಿವ ಸಂಪುಟ ಸಭೆಯ ನಿರ್ಣಯವನ್ನು ಅವರು ಅಷ್ಟು ಸುಲಭವಾಗಿ ತಿರಸ್ಕರಿಸುವುದಿಲ್ಲ ಎಂದೂ ಭಾವಿಸುತ್ತೇನೆ’ ಎಂದರು.
ಸಂಪುಟ ಪುನರ್ ರಚನೆ ಚರ್ಚೆ ಆಗಿಲ್ಲ: ‘ಹೈಕಮಾಂಡ್ ನಾಯಕರ ಜೊತೆ ಭಾನುವಾರ ನಡೆದ ಸಭೆಯಲ್ಲಿ ಸಚಿವರ ಬದಲಾವಣೆ, ಸಂಪುಟ ಪುನರ್ ರಚನೆ ಹೀಗೆ ಯಾವ ವಿಚಾರವೂ ಚರ್ಚೆ ಆಗಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಅವರು ಸಲಹೆ ನೀಡಿದ್ದಾರೆ ಅಷ್ಟೆ’ ಎಂದರು.
‘ಪಿಎಸ್‌ಐ ಪತ್ನಿಗೆ ಸರ್ಕಾರಿ ಕೆಲಸ’ ‘ಯಾದಗಿರಿ ಪಿಎಸ್‌ಐ ಪರಶುರಾಮ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ಕೊಡುತ್ತೇವೆ’ ಎಂದು ಪರಮೇಶ್ವರ ತಿಳಿಸಿದರು. ‘ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪರಶುರಾಮ್ ಸಾವಿಗೆ ಕಾರಣ ಗೊತ್ತಾಗಲಿದೆ’ ಎಂದರು. ‘ಪತಿಯ ಸಾವಿಗೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಮತ್ತು ಅವರ ಪುತ್ರ ಕಾರಣ’ ಎಂದು ಪರಶುರಾಮ್ ಪತ್ನಿ ಆರೋಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಈ ಪ್ರಕರಣವನ್ನು ಈಗಾಗಲೇ ಸಿಐಡಿಗೆ ನೀಡಲಾಗಿದೆ. ತನಿಖೆಯ ವರದಿ ಬರಲಿ. ಶಾಸಕ ಮತ್ತು ಪುತ್ರನ ಪಾತ್ರ ಸಾಬೀತಾದರೆ ಅವರ ವಿರುದ್ದವೂ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.