ADVERTISEMENT

ವಿಧಾನ ಪರಿಷತ್ ಚುನಾವಣೆ: ‘ಕೈ’–ಜೆಡಿಎಸ್‌ಗೆ ಒಳೇಟಿನ ಭೀತಿ

ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರ: ಗೆಲುವಿನ ಬೆನ್ನಟ್ಟಿರುವ ಬಿಜೆಪಿ

ಜೆ.ಆರ್.ಗಿರೀಶ್
Published 6 ಡಿಸೆಂಬರ್ 2021, 19:45 IST
Last Updated 6 ಡಿಸೆಂಬರ್ 2021, 19:45 IST
   

ಕೋಲಾರ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಾಬಲ್ಯವಿರುವ ಅವಿಭಜಿತ ಕೋಲಾರ ಜಿಲ್ಲಾ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಅರಳಲು ‘ಕಮಲ’ದ ತುಡಿತ ಹೆಚ್ಚಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು
ಜೆಡಿಎಸ್‌ ನಡುವೆ ನೇರ ಹಣಾಹಣಿ ಇದ್ದು, ಬಿಜೆಪಿ ಗೆಲುವಿನ ಮಾಯ ಜಿಂಕೆ ಬೆನ್ನಟ್ಟಿದೆ.

ಕಳೆದ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಎಂ.ಎಲ್‌. ಅನಿಲ್‌ಕುಮಾರ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದೆ. ಆಂತರಿಕ ಕಚ್ಚಾಟವೇ ಪಕ್ಷಕ್ಕೆ ಮುಳುವಾಗುವ ಸೂಚನೆ ಕಾಣುತ್ತಿದೆ.

ಸೋಲಿನ ಅನುಭವದಿಂದ‘ಕೈ’ ನಾಯಕರು ಪಾಠ ಕಲಿತಂತಿಲ್ಲ ಎಂಬ ಅಭಿಪ್ರಾಯಗಳಿವೆ. ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಣಗಳ ಮೇಲಾಟವು ಮಗ್ಗಲುಮುಳ್ಳಾಗಿ ‘ಕೈ’ ಚುಚ್ಚುತ್ತಿದೆ. ಅವಳಿ ಜಿಲ್ಲೆಯಿಂದ ದೂರಉಳಿದಿರುವ ಮುನಿಯಪ್ಪ ಬೆಂಬಲಿಗರ ಮೂಲಕ ಭಿನ್ನಮತದ ದಾಳ ಉರುಳಿಸಿದ್ದಾರೆ.

ADVERTISEMENT

ಬಣಗಳ ಗುದ್ದಾಟದ ಗಾಯಕ್ಕೆ ಮುಲಾಮು ಹಚ್ಚಲಾಗದೆ ಅಸಹಾಯಕವಾಗಿರುವ ಹೈಕಮಾಂಡ್‌ ಪಕ್ಷದ ಸ್ಥಳೀಯ ಶಾಸಕರಿಗೆ ಜವಾಬ್ದಾರಿ ನೀಡಿ ಕೈ ತೊಳೆದುಕೊಂಡಿದೆ. ಕಾಂಗ್ರೆಸ್‌ನಿಂದ ದೂರವಾಗಿದ್ದ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಮತ್ತು ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ, ಪಕ್ಷೇತರರಾದ ಕೊತ್ತೂರು ಮಂಜುನಾಥ್‌ ಕಾಂಗ್ರೆಸ್‌ಗೆ ಜೈ ಎಂದಿದ್ದು, ಆ ಪಕ್ಷಕ್ಕೆ ಆನೆ ಬಲ
ಬಂದಿದೆ.

ಜೆಡಿಎಸ್‌ಗೆ ಸವಾಲು: ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವುದು ದೊಡ್ಡ ಸವಾಲಾ
ಗಿದೆ. ಪಕ್ಷವು ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ಅವರನ್ನು ಕಣಕ್ಕಿಳಿ
ಸಿದೆ. ಅವಳಿ ಜಿಲ್ಲೆಯಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರ ಪೈಕಿ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ್ದು, ಪಕ್ಷಕ್ಕೆ ಕೊಂಚ ಹಿನ್ನಡೆಯಾಗಿದೆ.

ಪಕ್ಷದ ಕೆಲವು ಹಿರಿಯ ಮುಖಂಡರು, ವರಿಷ್ಠರ ವಿರುದ್ಧ ಮುನಿದಿದ್ದು ಒಳ ಏಟಿನ ಭೀತಿ ಕಾಡುತ್ತಿದೆ. ರಮೇಶ್‌ಕುಮಾರ್‌ ಬಣದ ವಿರುದ್ಧ ಕುದಿಯುತ್ತಿರುವ ಮುನಿಯಪ್ಪ ಜತೆ ಕೈ ಕುಲುಕಲು ಜೆಡಿಎಸ್‌ ವರಿಷ್ಠರು ತೆರೆಮರೆಯಲ್ಲೇ ತಂತ್ರಗಾರಿಕೆ ರೂಪಿಸಿದ್ದಾರೆ.

ಆಪರೇಷನ್‌ ಕಮಲ: ಬಿಜೆಪಿ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ಕಣಕಿಳಿದಿದ್ದಾರೆ. ಕಾಂಗ್ರೆಸ್‌ ಒಳ ಜಗಳದ ಲಾಭ ಪಡೆಯಲು ಬಿಜೆಪಿ ಯತ್ನಿಸಿದೆ. ಸಚಿವ ಡಾ.ಕೆ.ಸುಧಾಕರ್‌ ರಾಜಕೀಯ ಬದ್ಧವೈರಿ ರಮೇಶ್‌ಕುಮಾರ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಚುನಾವಣೆಯನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಶತಾಯಗತಾಯ ಗೆಲ್ಲುವ ಹಟಕ್ಕೆ ಬಿದ್ದಿರುವ ಬಿಜೆಪಿ ನಾಯಕರು ‘ಆಪರೇಷನ್‌ ಕಮಲ’ ನಡೆಸಿದ್ದಾರೆ. ಗುಟ್ಟು ಬಿಡದ ಮತದಾರರು ಕುತೂಹಲ ಹೆಚ್ಚಿಸಿದ್ದಾರೆ.

ಪಕ್ಷದೊಳಗಿನ ವ್ಯತ್ಯಾಸಗಳಿಂದ ಹಿಂದಿನ ಚುನಾವಣೆಯಲ್ಲಿ ಸೋತೆ. ಈ ಬಾರಿ ಗೆಲುವು ನಿಶ್ಚಿತ. ಹಿರಿಯ ನಾಯಕ ಮುನಿಯಪ್ಪ ಅವರು ಪಕ್ಷ ದ್ರೋಹ ಮಾಡಲ್ಲ.

– ಎಂ.ಎಲ್‌. ಅನಿಲ್‌ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ

ವಿರೋಧ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲಗಳಿವೆ. ನಮ್ಮ ಪಕ್ಷದಲ್ಲಿ ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ಗೆಲ್ಲುವ ವಿಶ್ವಾಸವಿದೆ.

– ವಿ.ಇ.ರಾಮಚಂದ್ರ, ಜೆಡಿಎಸ್‌ ಅಭ್ಯರ್ಥಿ

ಎರಡೂವರೆ ದಶಕದಿಂದ ಗ್ರಾಮೀಣ ಭಾಗದಲ್ಲಿ ಜನ ಸೇವೆ ಮಾಡಿದ್ದೇನೆ. ಮತದಾರರು ಬಿಜೆಪಿ ಪರವಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ ಬಿಜೆಪಿ ಮೇಲುಗೈ ಸಾಧಿಸುತ್ತದೆ.

– ಡಾ.ಕೆ.ಎನ್‌.ವೇಣುಗೋಪಾಲ್‌ , ಬಿಜೆಪಿ ಅಭ್ಯರ್ಥಿ

ಮತದಾರರ ಅಂಕಿ ಅಂಶ
5,600–ಒಟ್ಟು ಮತದಾರರು
2,925–ಮಹಿಳೆಯರು
2,675–ಪುರುಷರು
321–ಒಟ್ಟು ಮತಗಟ್ಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.