ADVERTISEMENT

ವಿಧಾನಪರಿಷತ್‌ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 22:31 IST
Last Updated 9 ಡಿಸೆಂಬರ್ 2025, 22:31 IST
<div class="paragraphs"><p>ವಿಧಾನಪರಿಷತ್‌ </p></div>

ವಿಧಾನಪರಿಷತ್‌

   

ವಿಧಾನಪರಿಷತ್‌ ಪ್ರಶ್ನೋತ್ತರಗಳು

10 ಎಕರೆ ಮೇಲ್ಪಟ್ಟ ಬಡಾವಣೆ: ಎಸ್‌ಟಿಪಿ ಕಡ್ಡಾಯ 

10 ಎಕರೆಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಹೊಸ ಬಡಾವಣೆಗಳಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಕಡ್ಡಾಯ. ರಾಜ್ಯದ ಎಲ್ಲಾ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲೂ ಈ ನಿಯಮವನ್ನು ಪಾಲಿಸಬೇಕು

ADVERTISEMENT

–ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (ಪ್ರಶ್ನೆ: ಕಾಂಗ್ರೆಸ್‌ನ ಕೆ.ಶಿವಕುಮಾರ್)

ಹೂಡಿಕೆ: 6.92 ಲಕ್ಷ ಜನರಿಗೆ ಉದ್ಯೋಗ

ರಾಜ್ಯ ಸರ್ಕಾರದ ಉನ್ನತ ಮಟ್ಟದ ಒಪ್ಪಿಗೆ ಸಮಿತಿ 1,888 ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದು, ₹5.03 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದೆ. 67 ಯೋಜನೆಗಳಿಂದ ₹66,435 ಕೋಟಿ ಈಗಾಗಲೇ  ಹೂಡಿಕೆಯಾಗಿದೆ. ಅನುಮೋದನೆ ನೀಡಿದ ಮೊತ್ತ ಸಂಪೂರ್ಣ ಹೂಡಿಕೆಯಾದರೆ 6.92 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ

–ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ (ಪ್ರಶ್ನೆ: ಬಿಜೆಪಿಯ ಕೇಶವ ಪ್ರಸಾದ್)

‘ಸದಸ್ಯರ ಗೌರವಧನ ಹೆಚ್ಚಳ ಶೀಘ್ರ’

ಪಟ್ಟಣ ಪಂಚಾಯಿತಿ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಗೌರವಧನವನ್ನು ಶೀಘ್ರ ಹೆಚ್ಚಳ ಮಾಡಲಾಗುವುದು. ಇದೇ ವರ್ಷದ ಅಕ್ಟೋಬರ್‌ನಲ್ಲೇ ಹೆಚ್ಚಳದ ಪ್ರಸ್ತಾವ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಹೆಚ್ಚಳದ ಮೊತ್ತವನ್ನು ಆಯಾ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳಿಂದ ಭರಿಸುವ ಕಾರಣ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ಎಷ್ಟು ಮೊತ್ತ ಹೆಚ್ಚಳ ಎನ್ನುವ ಕುರಿತು ನಿರ್ಧಾರ ಮಾಡಲಾಗುವುದು

–ಪೌರಾಡಳಿತ ಸಚಿವ ರಹೀಂ ಖಾನ್ (ಪ್ರಶ್ನೆ: ಕಾಂಗ್ರೆಸ್‌ನ ಸುನಿಲ್‌ಗೌಡ)

ರೋಗ ಬಾಧೆ: 4 ಲಕ್ಷ ಹೆಕ್ಟೇರ್ ತೆಂಗಿಗೆ ಹಾನಿ

ಕಪ್ಪು ತಲೆ ಹುಳು ಬಾಧೆಯಿಂದ  62,044 ಹೆಕ್ಟೇರ್‌ ಮತ್ತು ಬಿಳಿ ನೊಣಗಳ ರೋಗಬಾಧೆಯಿಂದ 3.24 ಲಕ್ಷ ಹೆಕ್ಟೇರ್‌ ತೆಂಗು ಬೆಳೆಗೆ ಹಾನಿಯಾಗಿದೆ. ಒಟ್ಟು 4 ಲಕ್ಷ ಹೆಕ್ಟೇರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ರೋಗ ಕುರಿತು ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಲಾಗಿತ್ತು. ಜನವರಿಯಿಂದ ಕಪ್ಪುತಲೆ ಹುಳುವಿನ ಸಮೀಕ್ಷೆಯನ್ನು ಪುನಾರಂಭಿಸಿ ಶೀಘ್ರ ಪೂರ್ಣಗೊಳಿಸಲಾಗುವುದು. ಪರಿಹಾರ ವಿತರಿಸಲಾಗುವುದು.

–ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ (ಕಾಂಗ್ರೆಸ್‌ನ ಮಧು ಮಾದೇಗೌಡ)

ನಿವೇಶನ ವಿನ್ಯಾಸ: ಕರಾವಳಿಗೆ ಪ್ರತ್ಯೇಕ

ಕರಾವಳಿ ಜಿಲ್ಲೆಗಳು ಭೌಗೋಳಿಕವಾಗಿ ಭಿನ್ನವಾಗಿರುವುದರಿಂದ ಏಕ, ಬಹು ನಿವೇಶನ ವಿನ್ಯಾಸ ಅನುಮೋದನೆ ನೀಡುವ ಕುರಿತು ವಿಶೇಷ ಸೇವೆಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡದೆ ಇರುವ ಒಂದು ಎಕರೆ ಒಳಗಿನ ಜಮೀನುಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಹತ್ತಿರದ ಯೋಜನಾ ಪ್ರಾಧಿಕಾರಗಳ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ

–ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (ಪ್ರಶ್ನೆ: ಕಾಂಗ್ರೆಸ್‌ನ ಮಂಜುನಾಥ ಭಂಡಾರಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.