ADVERTISEMENT

ಲಿಂಬೆ ದರ ಏರಿಕೆ: ಬೆಳೆಗಾರರಿಗೆ ಖುಷಿ- ಒಂದು ಡಾಗ್‌ ಲಿಂಬೆಗೆ ಗರಿಷ್ಠ ₹7000!

ಬಸವರಾಜ ಸಂಪಳ್ಳಿ
Published 22 ಏಪ್ರಿಲ್ 2022, 21:00 IST
Last Updated 22 ಏಪ್ರಿಲ್ 2022, 21:00 IST
ವಿಜಯಪುರ ಜಿಲ್ಲೆಯಲ್ಲಿ ರೈತರು ಬೆಳೆಯುವ ‘ಕಾಗ್ಜಿ’ ತಳಿಯ ಲಿಂಬೆ ಹಣ್ಣುಗಳ ರಾಶಿ
ವಿಜಯಪುರ ಜಿಲ್ಲೆಯಲ್ಲಿ ರೈತರು ಬೆಳೆಯುವ ‘ಕಾಗ್ಜಿ’ ತಳಿಯ ಲಿಂಬೆ ಹಣ್ಣುಗಳ ರಾಶಿ   

ವಿಜಯಪುರ: ಈ ಬಾರಿಯ ಬೇಸಿಗೆಯಲ್ಲಿ ಲಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದ್ದು, ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಲಿಂಬೆ ಬೆಳೆಗಾರರು ಖುಷಿಯಾಗಿದ್ದಾರೆ.

ರಾಜ್ಯದ ‘ಲಿಂಬೆ ಕಣಜ’ ಎಂದೇ ಪ್ರಸಿದ್ಧವಾದ ವಿಜಯಪುರ ಜಿಲ್ಲೆಯಲ್ಲಿ ವಾರದ ಸಂತೆಗಳಲ್ಲಿ ದೊಡ್ಡ ಗಾತ್ರ ಲಿಂಬೆ ₹ 20ಕ್ಕೆ ನಾಲ್ಕರಂತೆ ಮತ್ತು ಸಣ್ಣ ಗಾತ್ರದ ಲಿಂಬೆ ₹ 20ಕ್ಕೆ ಆರರಂತೆ ಮಾರಾಟವಾಗುತ್ತಿದೆ.

ಹಿಂದಿನ ವರ್ಷಗಳಲ್ಲಿ 40 ಕೆ.ಜಿ. ತೂಕದ ಒಂದು ಡಾಗ್‌ (1,100 ಲಿಂಬೆ ಕಾಯಿಗಳಿರುವ ಒಂದು ಚೀಲ) ಕನಿಷ್ಠ ₹ 3 ಸಾವಿರದಿಂದ ಗರಿಷ್ಠ ₹ 4 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಸದ್ಯ ಒಂದು ಡಾಗ್‌ಗೆ ಕನಿಷ್ಠ ₹ 4 ಸಾವಿರದಿಂದ ಗರಿಷ್ಠ ₹ 7 ಸಾವಿರಕ್ಕೆ ದರ ಏರಿದೆ.

ADVERTISEMENT

‘ವಿಜಯಪುರ ಎಪಿಎಂಸಿ ಮಾರುಕಟ್ಟೆಗೆ ಪ್ರತಿ ಬುಧವಾರ ಹಾಗೂ ಭಾನುವಾರ 2,500ರಿಂದ 3,000 ಡಾಗ್‌ (ಲಿಂಬೆ ಚೀಲ) ಆವಕವಾಗುತ್ತಿದೆ. ಗುಣಮಟ್ಟದ ಲಿಂಬೆ ಹಣ್ಣಿನ ಪೂರೈಕೆ ಕಡಿಮೆಯಾಗಿರುವುದರಿಂದ ದರ ಏರಿಕೆಯಾಗಿದೆ, ರೈತರಿಗೆ ಹೆಚ್ಚಿನ ದರ ಸಿಗುತ್ತಿದೆ’ ಎಂದು ಎಪಿಎಂಸಿ ಮಾರುಕಟ್ಟೆ ವ್ಯವಸ್ಥಾಪಕ ರಮೇಶಗೌಡ ತಿಳಿಸಿದರು.

‘ಹವಾಮಾನ ವೈಪರೀತ್ಯದಿಂದಾಗಿಈ ಬಾರಿ ಲಿಂಬೆ ಗಿಡಗಳು ಹೂವು, ಕಾಯಿ ಕಟ್ಟಲು ತೊಂದರೆಯಾಗಿತ್ತು. ಹೀಗಾಗಿ ಈ ವರ್ಷ ಇಳುವರಿ ಕಡಿಮೆ, ಎಕರೆಗೆ ಸರಾಸರಿ 10 ಟನ್‌ ಇಳುವರಿ ಬಂದಿದೆ. ಜೊತೆಗೆ ಗುಣಮಟ್ಟದ ಲಿಂಬೆ ಹಣ್ಣುಗಳ ಕೊರತೆಯೂ ಇದೆ’ ಎಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ಸಂತೋಷ ಸಪ್ಪಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.