ADVERTISEMENT

ಚಿಕ್ಕ ಭೂಮಿಗೆ ಸರ್ವೆ ನಂಬರ್‌ ಇಲ್ಲ

5 ಗುಂಟೆಗಿಂತ ಕಡಿಮೆ ಇದ್ದರೆ ಅವಕಾಶ ಇಲ್ಲ l ಫಾರ್ಮ್‌ಹೌಸ್‌ಗಳಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:04 IST
Last Updated 29 ಅಕ್ಟೋಬರ್ 2019, 19:04 IST
   

ಬೆಂಗಳೂರು: ಕೃಷಿ ಭೂಮಿ ಫಾರ್ಮ್‌ಹೌಸ್‌ಗಳಾಗುವುದು,ವಸತಿ ಸಂಕೀರ್ಣಗಳಾಗುವುದು ಅಥವಾ ಕಂದಾಯ ನಿವೇಶನವಾಗಿ ಬದಲಾಗುವುದನ್ನು ತಡೆಗಟ್ಟುವುದಕ್ಕಾಗಿ 5 ಗುಂಟೆಗಿಂತ (5,445ಚದರ ಅಡಿ) ಕಡಿಮೆ ವಿಸ್ತೀರ್ಣದ ಕೃಷಿ ಭೂಮಿಗೆ ಸರ್ವೆ ನಂಬರ್‌ ನೀಡದಿರಲು ಸರ್ಕಾರ ಚಿಂತನೆ ನಡೆಸುತ್ತಿದೆ.

ನಗರಗಳ ಸುತ್ತಮುತ್ತಲಿನ ಸಣ್ಣ ಸಣ್ಣ ಕೃಷಿ ಭೂಮಿಯನ್ನು ಮಾರಾಟ ಮಾಡಿ, ಅವುಗಳನ್ನು ಫಾರ್ಮ್‌ ಹೌಸ್‌,ವಸತಿ ನಿವೇಶನ ಅಥವಾ ಕಂದಾಯ ನಿವೇಶನಗಳನ್ನಾಗಿ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದ್ದು, ಜಮೀನಿಗೆ ಸರ್ವೆ ನಂಬರ್ ಇಲ್ಲದಿದ್ದರೆ ಅದನ್ನು ಮಾರಾಟ ಮಾಡುವುದೂ, ಕೊಳ್ಳುವುದೂ ಸಾಧ್ಯವಿಲ್ಲ.

ಸರ್ವೆ ನಂಬರ್ ನೀಡುವ ಕನಿಷ್ಠ ನಿವೇಶನದ ಗಾತ್ರವನ್ನು 5 ಗುಂಟೆಗಳಿಗೆ ನಿಗದಿಪಡಿಸಲು ಹಾಗೂ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅದನ್ನು 3 ಗುಂಟೆಗಳಿಗೆ ನಿಗದಿಪಡಿಸಲು ಉದ್ದೇಶಿಸಿದೆ.

ADVERTISEMENT

ಕೃಷಿ ಭೂಮಿಯಲ್ಲಿರುವ ವಸತಿ ಪ್ರದೇಶವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿದರೆ ಸಾರ್ವಜನಿಕ ಬಳಕೆಯ ಸೌಲಭ್ಯಗಳು ಮತ್ತು ಇತರ ಉದ್ದೇಶಗಳಿಗಾಗಿ ಒಂದಿಷ್ಟು ಸ್ಥಳವನ್ನು ಮೀಡಲಿಡಬೇಕಾಗುತ್ತದೆ. ಆದರೆ ಕೃಷಿ ಮಾಡುವ ನೆಪದಲ್ಲಿ ಸಣ್ಣ ನಿವೇಶನಗಳ ವಹಿವಾಟು ನಡೆದರೆ ಸಾರ್ವಜನಿಕ ಉದ್ದೇಶಕ್ಕೆ ಸ್ಥಳ ಮೀಸಲಿಡುವ ಅಗತ್ಯ ಬೀಳುವುದಿಲ್ಲ.

‘ಕೃಷಿ ಭೂಮಿಯನ್ನು 1ರಿಂದ 5 ಗುಂಟೆಗಳ ಗಾತ್ರಕ್ಕೆ ವಿಭಜಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಹುತೇಕ ಎಲ್ಲ ಜಿಲ್ಲಾಧಿಕಾರಿಗಳೂ ದೂರು ನೀಡುತ್ತಿದ್ದಾರೆ. ಇಂತಹ ನಿವೇಶನ ಮಾರಾಟದ ನಿಜವಾದ ಉದ್ದೇಶ ವಸತಿ ಪ್ರದೇಶಗಳನ್ನು ನಿರ್ಮಿಸುವುದೇ ಆಗಿರುತ್ತದೆ. ಇಂತಹ ನಿವೇಶನಗಳಿಂದಾಗಿಯೇ ನಗರಗಳ ಹೊರಭಾಗದಲ್ಲಿ ಸರಿಯಾದ ಯೋಜನೆ ಇಲ್ಲದೆ, ಅಡ್ಡಾದಿಡ್ಡಿಯಾಗಿ ವಸತಿ ಪ್ರದೇಶಗಳು ಬೆಳೆಯುವುದಕ್ಕೆ ಕಾರಣವಾಗುತ್ತದೆ’ ಎಂದು ‘ಭೂಮಿ’ ಮತ್ತು ನಗರ ಆಸ್ತಿ ಮಾಲೀಕತ್ವ ದಾಖಲೆಗಳ (ಒಪಿಒಆರ್‌) ನಿರ್ದೇಶಕ ಮುನೀಶ್ ಮೌದ್ಗಿಲ್‌ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಇದರ ಒಂದು ಪ್ರತಿ ‘ಪ್ರಜಾವಾಣಿ’ಗೆ ದೊರೆತಿದೆ.

‘ಕಡತ ನನ್ನ ಬಳಿ ಇದೆ, ಅದನ್ನು ಪರಿಶೀಲಿಸಬೇಕಷ್ಟೇ’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಕಾಯ್ದೆಯಲ್ಲೇ ಇದೆ ಅವಕಾಶ

1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್‌ 108ರ ಪ್ರಕಾರ ನಿರ್ದಿಷ್ಟ ಅಳತೆಗಿಂತ ಕಡಿಮೆ ಅಳತೆಯ ಕೃಷಿ ಭೂಮಿಗೆ ಸರ್ವೇ ನಂಬರ್ ನೀಡಬಾರದು, ಅಂತಹ ಕನಿಷ್ಠ ಮಿತಿಯನ್ನು ಕಾಲ ಕಾಲಕ್ಕೆ ನಿಗದಿಪಡಿಸಬೇಕು ಎಂದು ತಿಳಿಸಲಾಗಿದೆ. ‘ಇದೇ ಕಾಯ್ದೆಯಂತೆ ನಾವು ಸಾರ್ವಜನಿಕ ಹಿತಾಸಕ್ತಿಯಿಂದ ಕನಿಷ್ಠ 5 ಗುಂಟೆಯ ಮಿತಿ ವಿಧಿಸುವ ಪ್ರಸ್ತಾವ ಮಾಡಿದ್ದೇವೆ’ ಎಂದು ಸರ್ವೇ ನಿರ್ವಹಣೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರೂ ಆಗಿರುವಮೌದ್ಗಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.